ಬೆಳ್ತಂಗಡಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಮಂಗಳವಾರದಿಂದ ಪ್ರತೀ ದಿನ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಗ್ಗಿನವರೆಗೆ 15 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗುವುದೆಂದು ತಾಲೂಕಿನ 46 ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರ ಮುಖ್ಯಸ್ಥರು, ರಿಕ್ಷಾ ಚಾಲಕರ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ನಿರ್ಣಯ ಕೈಗೊಂಡಿದ್ದಾರೆ.
ಶನಿವಾರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಶಾಸಕ ಹರೀಶ್ ಪೂಂಜಾರವರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಬಹುತೇಕ ವರ್ತಕರು ಮತ್ತು ಚಾಲಕರು ಅಭಿಪ್ರಾಯಗಳನ್ನು ಮಂಡಿಸಿದರು. ಬಳಿಕ ಶಾಸಕ ಹರೀಶ್ ಪೂಂಜಾ ಮಾತನಾಡಿ, ಇದು ಶಾಸಕರ ತೀರ್ಮಾನವಲ್ಲ, ಯಾವುದೇ ಪಕ್ಷದ ತೀರ್ಮಾನವಲ್ಲ, ಯಾವುದೇ ಜಾತಿ ಧರ್ಮದ ತೀರ್ಮಾನವಲ್ಲ. ಕೊರೊನಾಕ್ಕೆ ಪಕ್ಷ, ಜಾತಿ, ಬೇಧ ಎಂಬುದಿಲ್ಲ. ತಾಲೂಕಿನ ಜನತೆ ಕೊರೊನಾ ನಿಯಂತ್ರಣದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ವ್ಯಾಪಕ ಬೆಂಬಲ ಬಂದಿರುವುದರಿಂದ ಮಂಗಳವಾರದಿಂದ ಮಧ್ಯಾಹ್ನದ ನಂತರ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಸಹಕಾರ ನೀಡಿರುವುದು ತಾಲೂಕಿನ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೆ ಜನರ ಒಗ್ಗಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣ ಬಂದವರಿಗೆ ಬೇರೆಯೆ ವಾಸ್ತವ್ಯಕ್ಕೆ ವ್ಯವಸ್ಥೆ ಮತ್ತು ಚಿಕಿತ್ಸೆ ನೀಡಲು ಚಿಂತಿಸಿದ್ದು ಅದಕ್ಕಾಗಿ ನಾನು ಮತ್ತು ಜಿಲ್ಲಾಡಳಿತ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಟಿ.ಬಿ ಆಸ್ಪತ್ರೆಯನ್ನು ನೀಡುವಂತೆ ವಿನಂತಿಸಿದ್ದು ಇದಕ್ಕೆ ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ. ಇಲ್ಲಿ ಸುಮಾರು 150 ಮಂದಿಗೆ ಉತ್ತಮವಾದ ಸೌಕರ್ಯದೊಂದಿಗೆ ಚಿಕಿತ್ಸೆ ನೀಡಬಹುದು. ಅಲ್ಲದೆ ಇಲ್ಲಿ ದಾಖಲಾಗುವವರಿಗೆ ಊಟ, ಉಪಹಾರದ ವ್ಯವಸ್ಥೆಯನ್ನು ಡಾ. ಹೆಗ್ಗಡೆಯವರೇ ಭರಿಸುವುದಾಗಿ ತಿಳಿಸಿದ್ದು ಇದು ನಮ್ಮ ಸೌಭಾಗ್ಯ ಎಂದರು.