ಬೆಳ್ತಂಗಡಿ(ದಕ್ಷಿಣ ಕನ್ನಡ) :ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ್ ನಾಯಕ್ಗೆ ಮೂರು ತಿಂಗಳ ಸಜೆ ಹಾಗೂ 4.5 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿದ್ದ ಬೆಳ್ತಂಗಡಿ ಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಸೋಮವಾರ CJ ಮತ್ತು JMFC ಬೆಳ್ತಂಗಡಿ ನ್ಯಾಯಾಧೀಶರಾದ ವಿಜಯೇಂದ್ರರ ಮುಂದೆ ಸೋಮನಾಥ್ ನಾಯಕ್ ಹಾಜರಾಗಿದ್ದು, ಬೆಳ್ತಂಗಡಿ ಕೋರ್ಟ್ನಿಂದ ಅವರನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಬಗ್ಗೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಬರಹಗಳನ್ನು ಬರೆದಿದ್ದರು ಎಂಬ ಆರೋಪ ಇವರ ಮೇಲಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಅಥವಾ ಸಂಸ್ಥೆಯ ಕುರಿತು ಗೌರವಕ್ಕೆ ಚ್ಯುತಿ ತರುವಂತಹ ಯಾವುದೇ ಬರವಣಿಗೆ ಅಥವಾ ಹೇಳಿಕೆ ನೀಡದಂತೆ ಬೆಳ್ತಂಗಡಿ ನ್ಯಾಯಾಲಯವು ನಾಯಕ್ ಸೇರಿದಂತೆ ಐದು ಜನರಿಗೆ ಈ ಹಿಂದೆಯೇ ಆದೇಶ ಮಾಡಿತ್ತು. ಆದ್ರೆ ಇದನ್ನು ಮೀರಿ ಮತ್ತೆ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿರುವುದಕ್ಕಾಗಿ ಅದೇ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಾಗಿತ್ತು.