ಮಂಗಳೂರು:ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಪೇಜ್ ಬಗ್ಗೆ ಮಂಗಳೂರು ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
ವಿವಾದಾತ್ಮಕ ಪೋಸ್ಟ್ ಮಾಡಿದವರು ಯಾರೇ ಆದರೂ, ಅವರು ಎಷ್ಟೇ ಪ್ರಭಾವಿಯಾದರೂ ಅವರ ಆಯುಷ್ಯ ವೃದ್ಧಿಯಾಗೋಲ್ಲ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಅಲ್ಲದೆ ಕೊಲೆಯ ಸತ್ಯಾಸತ್ಯತೆ ಬಯಲಾಗಬೇಕಿದ್ದಲ್ಲಿ ತನಿಖೆ ಮಾಡಿಸಿ ಎಂದು ಮುಸ್ಲಿಂ ಪೇಜ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ಹಾಗೂ ಬೆದರಿಕೆ ಒಡ್ಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಮ್ಸ್ ಪೇಜ್ ಮೇಲೆ ಮಂಗಳೂರು ಪೊಲೀಸರು ಸೆನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಈ ಪೋಸ್ಟ್ ಅನ್ನು ಲೈಕ್, ಶೇರ್ ಹಾಗೂ ಕಮೆಂಟ್ಸ್ ಗಳನ್ನು ಮಾಡಿದವರೂ ಅಪರಾಧಿಗಳಾಗಿದ್ದು, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.