ಮಂಗಳೂರು: ನಗರದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದೆ. ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಕಾನೂನು ಬಾಹಿರ ಚಟುವಟಿಕೆ ಮಾಡ್ತಾ ಇದ್ದಾರೆ. ಇದಕ್ಕೆಲ್ಲ ಯಾವುದೇ ಜಾತಿ ಧರ್ಮ ಬರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಜರಂಗದಳ ಕಾರ್ಯಕರ್ತರಿಗೆ ಗಡೀಪಾರು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು ಕಾನೂನು ಬಾಹಿರ ಚಟುವಟಿಕೆ ಯಾರೇ ಕೈಗೊಳ್ಳಲಿ ಅವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಸರ್ಕಾರ ಕೈಗೊಳ್ಳಲಿದೆ. ಬಜರಂಗ ದಳ ಕಾರ್ಯಕರ್ತರು ಕಾನೂನು ಬಾಹಿರ ಚಟುವಟಿಕೆ ಮಾಡ್ತಾ ಇದ್ದಾರೆ. ಇಂಥವರ ಪರ ಬಿಜೆಪಿಯವರು ವಕಾಲತ್ತು ವಹಿಸ್ತಾರೆ ಎಂದರೆ ಅದಕ್ಕಿಂತ ಕೆಟ್ಟ ಸಂಗತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪೊಲೀಸರಿಗೆ ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಯಾವುದೇ ಪ್ರಸ್ತಾಪ ಇಲ್ಲ. ಗಡೀಪಾರು ನೋಟೀಸ್ ಕೊಟ್ಟವರು ಅಪರಾಧಿಗಳು, ಅನೇಕ ಪ್ರಕರಣಗಳಲ್ಲಿ ಭಾಗಿಯಾದವರು, ಅನೇಕ ಕೇಸ್ ಇದೆ. ಆ ರೀತಿ 65 ಜನರನ್ನ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪಟ್ಟಿಯನ್ನು ಇವರು ನೋಡಲಿ, ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾನೂನು ಬಾಹಿರ ಚಟುವಟಿಕೆಗೆ ಬಿಜೆಪಿ ಇದನ್ನ ಪ್ರೋತ್ಸಾಹಿಸುತ್ತೆ ಎಂದಾದರೆ, ಅಂಥವರಿಗೆ ಇವರ ಬೆಂಬಲ ಇದೆ ಅಂತಾಯ್ತು. ಅಪರಾಧಿಗಳಿಗೆ ಬಿಜೆಪಿ ಬೆಂಬಲ ಕೊಡ್ತಾ ಇದೆ. ಪೊಲೀಸ್ ಇಲಾಖೆಯಲ್ಲಿ ನಮ್ಮದು ಯಾವುದೇ ಹಸ್ತಕ್ಷೇಪ ಇಲ್ಲ. ಡ್ರಗ್ ಮಾಫಿಯಾ, ನೈತಿಕ ಪೊಲೀಸ್ ಗಿರಿ ವಿರುದ್ದ ಕ್ರಮ ತೆಗೆದುಕೊಳ್ತಾ ಇದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ನಾಯಕರು ವಾತಾವರಣ ಕೆಡಿಸ್ತಾ ಇದ್ದಾರೆ ಎಂದು ಆರೋಪಿಸಿದರು.