ಮಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಹಾಗೂ ರಾಜಕೀಯ ದ್ವೇಷದ ಹತ್ಯೆ ಪ್ರಕರಣಗಳ ಮರು ತನಿಖೆಗೆ ಒತ್ತಾಯ ಕೇಳಿ ಬರುತ್ತಿದೆ. "ಹತ್ಯೆಯ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡುವಂತೆ" ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ.
ಈ ಬಗ್ಗೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಹಾಗೂ ಹತ್ಯೆಯಾದ ಬೆಳ್ಳಾರೆಯ ಮಸೂದ್ ತಾಯಿ ಸಾರಾ ಮನವಿ ಪತ್ರ ನೀಡಿದ್ದಾರೆ. ಕಳೆದ ವರ್ಷ ಬೆಳ್ಳಾರೆಯ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್ ಮಂಗಳಪೇಟೆಯ ಫಾಝಿಲ್, ಕಾಟಿಪಳ್ಳದ ಜಲೀಲ್ ಹಾಗೂ ಕನ್ಯಾಡಿಯ ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಹತ್ಯೆ ನಡೆದಿತ್ತು. ಇದೆಲ್ಲವೂ ಜಿಲ್ಲೆಯಲ್ಲಿ ಧರ್ಮಾಧಾರಿತ ಹಾಗೂ ರಾಜಕೀಯ ದ್ವೇಷದ ಕಾರಣಕ್ಕಾಗಿ ನಡೆದ ಕೊಲೆಗಳಾಗಿವೆ.
ಆದರೆ ಬಿಜೆಪಿ ಸರ್ಕಾರ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ಅವರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿತ್ತು. ಅಲ್ಲದೇ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಎನ್ಐಎ ನೀಡಿತ್ತು. ಆದರೆ ಉಳಿದ 4 ಪ್ರಕರಣಗಳನ್ನು ಕಡೆಗಣಿಸಿತ್ತು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ದೊರೆತ ಸರ್ಕಾರದ ಸಾಂತ್ವಾನ ಹಾಗೂ ಪರಿಹಾರ ಉಳಿದ ಕುಟುಂಬಗಳಿಗೆ ದೊರಕಿರಲಿಲ್ಲ. ಆದ್ದರಿಂದ ಹಿಂದಿನ ಸರ್ಕಾರದಿಂದ ಆಗಿರುವ ತಾರತಮ್ಯ ಹಾಗೂ ಅನ್ಯಾಯವನ್ನು ಸರಿಪಡಿಸಿ ಕಾಂಗ್ರೆಸ್ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ನಾಲ್ಕು ಹತ್ಯೆಯ ಪ್ರಕರಣವನ್ನು ಮರು ತನಿಖೆಗೊಳಪಡಿಸಿ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಲ್ಲದೇ ಎಸ್ಐಟಿ ರಚಿಸಿ ತನಿಖೆ ನಡೆಸಬೇಕು. ನಾಲ್ವರ ಕುಟುಂಬಕ್ಕೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗ ಕಲ್ಪಿಸಿದಂತೆ ಈ ನಾಲ್ವರ ಕುಟುಂಬಸ್ಥರಿಗೂ ಸರ್ಕಾರ ಉದ್ಯೋಗ ಕೊಡಿಸಬೇಕು. ಫಾಝಿಲ್ ಕೊಲೆಪ್ರಕರಣದಲ್ಲಿ ವಿಹೆಚ್ಪಿ ಮುಖಂಡ ಶರಣ್ ಪಂಪ್ ವೆಲ್ ಅವರನ್ನು ಆರೋಪಿಯನ್ನಾಗಿಸಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.