ಮಂಗಳೂರು (ದಕ್ಷಿಣ ಕನ್ನಡ): ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಗೋಧಿ ಮತ್ತು ತೊಗರಿಬೇಳೆ ಇನ್ನೂ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿಲ್ಲ. ಅದನ್ನು ತಕ್ಷಣ ಬಿಡುಗಡೆ ಮಾಡದಿದ್ದಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿಗಳಲ್ಲಿ ತಕ್ಷಣದಿಂದಲೇ ಸಮರ್ಪಕ ಪಡಿತರ ವಿತರಣೆಯಾಗಲಿ: ಐವನ್ ಡಿಸೋಜ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಳೆಯಿಂದ 2ನೇ ಹಂತದ ಲಾಕ್ಡೌನ್ ಘೋಷಣೆಯಾಗಲಿದ್ದು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಕ್ಕಿ, ಗೋಧಿ ಹಾಗೂ ತೊಗರಿ ಬೇಳೆ ಪಡೆಯಲು ಪಡಿತರ ಚೀಟಿದಾರರು ಇಂದು ನ್ಯಾಯಬೆಲೆ ಅಂಗಡಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.
ಆದರೆ ಇದೀಗ ಅಕ್ಕಿ ಮಾತ್ರ ವಿತರಣೆಯಾಗುತ್ತಿದೆ. ಗೋಧಿ ಹಾಗೂ ತೊಗರಿ ಬೇಳೆ ಇನ್ನೂ ಬಂದಿಲ್ಲ. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಮೋಸ ಮಾಡುತ್ತಿವೆ. ಇದರ ವಿರುದ್ಧ ಜನರು ಪ್ರತಿಭಟನೆ ನಡೆಸಬೇಕಾಗಿದೆ ಎಂದರು.
ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಯಾಚರಣೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಬೆಳಗ್ಗೆ 8 ರಿಂದ 11ರ ವರೆಗೆ ಮಾತ್ರ ತೆರೆದಿಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಆದರೆ ನ್ಯಾಯಬೆಲೆ ಅಂಗಡಿಗಳನ್ನು ಎಂದಿನಂತೆ ಇಡೀ ದಿನ ತೆರೆದಿಟ್ಟು ಪಡಿತರ ಚೀಟಿದಾರರಿಗೆ ಪಡಿತರ ಪಡೆದುಕೊಳ್ಳುವ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದರು.