ಪುತ್ತೂರು:ದೆಹಲಿಯ ಹಿಂಸಾಚಾರ ಹಾಗೂ ಕೋಮು ಪ್ರಚೋದನಾ ಭಾಷಣ ಮಾಡಿ ಇದಕ್ಕೆ ಕಾರಣರಾದ ಶಾಸಕ ಕಪಿಲ್ ಮಿಶ್ರಾರನ್ನು ಬಂಧಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.
ನಗರದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು, ದೆಹಲಿ ಹಿಂಸಾಚಾರಕ್ಕೆ ಕಾರಣರಾದ ಶಾಸಕ ಕಪಿಲ್ ಮಿಶ್ರಾ ಹಾಗೂ ಬೆಂಬಲಿಗರ ಬಂಧಿಸಬೇಕು. ಈ ಹಿಂಸಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟಿನಿಂದ ನೇಮಿಸಲ್ಪಟ್ಟಿರುವ ಆ್ಯಮಿಕಸ್ ಕ್ಯೂರಿಯಿಂದ ಪರಿಶೀಲನೆ ನಡೆಸಿ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ ಬಳಿಕ ಮಾತನಾಡಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ , ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆ ದೇಶವೆ ತಲೆತಗ್ಗಿಸುವ ವಿಚಾರ. ತಲೆ ಬುಡವಿಲ್ಲದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿಯನ್ನು ನಿರ್ಮಿಸಲಾಗಿದ್ದು, ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕೋಮುವಾದಿ ಶಕ್ತಿಗಳು ಮಾಡುತ್ತಿವೆ. ಭಾರತ ದೇಶದ ಸಂವಿಧಾನವನ್ನು ಉಳಿಸಲು ಯಾವುದೇ ತ್ಯಾಗಕ್ಕೆ ಸಿದ್ಧರಾಗಬೇಕು. ನಾವು ಬದುಕಿದರೆ ಹಿಂದೂಸ್ಥಾನದಲ್ಲಿ ಇದನ್ನು ಬಿಟ್ಟು ಬೇರೆ ಎಲ್ಲಿಗೂ ಹೋಗುವುದಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಪ್ರತಿಭಟನೆ ನಡೆಸಲು ಯಾವತ್ತೂ ಹಿಂದೆ ಸರಿಯುವುದಿಲ್ಲ ಎಂದರು.
ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ ಮಾತನಾಡಿ, ಆರ್ಎಸ್ಎಸ್ ಗೂಂಡಾಗಳಿಂದಾಗಿ ದೆಹಲಿಯಲ್ಲಿ ಹಿಂಸಾಚಾರ ನಡೆದಿದ್ದು, ಇದು ಸಿಎಎ ಪ್ರತಿಭಟನೆಯನ್ನು ಹತ್ತಿಕ್ಕುವ ಷಡ್ಯಂತ್ರವಾಗಿದೆ. ಕಾನೂನು ಪಾಲನೆ ಮಾಡುವಲ್ಲಿ ಪೊಲೀಸರು ನಿಷ್ಕ್ರೀಯರಾಗಿದ್ದಾರೆ. ನಾವು ಇಷ್ಟರ ತನಕ ಸಹಿಸಿಕೊಂಡು ಬಂದರೂ ನಮ್ಮ ತಾಳ್ಮೆಯ ಕಟ್ಟೆ ಯಾವಾಗ ಹೊಡೆಯುತ್ತದೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲ ಎಂದರು.
ತಾಲೂಕು ಮುಸ್ಲಿಂ ಒಕ್ಕೂಟದ ಪ್ರಮುಖರಾದ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ.ರಜಾಕ್ ಹಾಜಿ, ಬನ್ನೂರು ಮಸೀದಿಯ ಖತೀಬ ಅಬ್ದುಲ್ ಮಜೀದ್ ಮಲ್ಲಿ ಸಖಾಫಿ, ವಕೀಲ ನೂರುದ್ದೀನ್ ಸಾಲ್ಮರ, ಕೆ.ಎಚ್.ಖಾಸಿಂ, ಇಬ್ರಾಹಿಂ ಸಾಗರ್, ಬಶೀರ್ ಕೂರ್ನಡ್ಕ, ಶಕೂರ್ ಹಾಜಿ, ಕೆ.ಎ.ಸಿದ್ದೀಕ್, ಹಮೀದ್ ಸಾಲ್ಮರ ಮತ್ತಿತರರು ಇದ್ದರು.