ದೀಪಾವಳಿ ಸಂಭ್ರಮ: ಮಂಗಳೂರಲ್ಲಿ ಗೂಡುದೀಪ ಸ್ಪರ್ಧೆ, ಗಮನ ಸೆಳೆದ 500ಕ್ಕೂ ಹೆಚ್ಚು ಆಕಾಶದೀಪಗಳು ಮಂಗಳೂರು: ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕಾಲ ಬದಲಾದಂತೆ ದೀಪಾವಳಿ ಆಚರಣೆ ವಿಧಾನಗಳು ಬದಲಾಗುತ್ತಾ ಬಂದಿದೆ. ಅದರಲ್ಲಿ ಗೂಡುದೀಪಗಳ ಬಳಕೆಯೂ ಒಂದು. ಹಿಂದಿನ ಕಾಲದಲ್ಲಿ ಇದ್ದ ಗೂಡುದೀಪಗಳ ಸಂಸ್ಕೃತಿಯನ್ನು ನೆನಪಿಸುವ ಸ್ಪರ್ಧೆಯೊಂದು ಮಂಗಳೂರಿನಲ್ಲಿ ನಡೆಯಿತು. ವಿವಿಧ ರೀತಿಯ ಕಲಾತ್ಮಕ ಗೂಡುದೀಪಗಳು ಎಲ್ಲರ ಗಮನಸೆಳೆದವು.
ನಮ್ಮ ಕುಡ್ಲ ವತಿಯಿಂದ ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಲ್ಪಡುವ ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ ಶನಿವಾರ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕಳೆದ 20 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಗೂಡುದೀಪ ಸ್ಪರ್ಧೆ ಆರಂಭವಾಗಿತ್ತು. ಮೊದಲು ಒಂದು ವಿಭಾಗದಲ್ಲಿ ಒಂದು ಪವನ್ ಬಂಗಾರದ ಪದಕವನ್ನು ನೀಡುವ ಮೂಲಕ ಸ್ಪರ್ಧೆ ನಡೆಸಲಾಗುತ್ತಿತ್ತು. ಇದೀಗ ಈ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯುತ್ತಿದೆ. ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ವಿಜೇತರಿಗೆ ಬಂಗಾರದ ಪದಕ ಹಾಗೂ ತೃತೀಯ ಸ್ಥಾನ ವಿಜೇತರಿಗೆ ಬೆಳ್ಳಿ ಪದಕ ಮಾತ್ರವಲ್ಲದೇ ನೆನಪಿನ ಕಾಣಿಕೆ, ಸ್ಮರಣಿಕೆಗಳನ್ನು ನೀಡಲಾಗುತ್ತಿದೆ.
ಹಿಂದಿನ ಕಾಲದಲ್ಲಿ ದೀಪಾವಳಿ ಸಂದರ್ಭದಲ್ಲಿ ಮನೆಯವರು ಒಟ್ಟು ಸೇರಿ ಗೂಡುದೀಪಗಳನ್ನು ತಯಾರಿಸುತ್ತಿದ್ದರು. ಬೇರೆ ಬೇರೆ ವಸ್ತುಗಳನ್ನು ಬಳಸಿ ಗೂಡುದೀಪಗಳನ್ನು ಮಾಡುತ್ತಿದ್ದರು. ಬಳಿಕ ದೀಪಾವಳಿ ಹಬ್ಬದ ದಿನಗಳಂದು ಮನೆಯ ಎದುರು ನೇತು ಹಾಕಿ ಬೆಳಗುತ್ತಿದ್ದರು. ಆದರೆ ಕಾಲ ಬದಲಾದಂತೆ ಮನೆಯಲ್ಲಿ ಗೂಡುದೀಪ ರಚಿಸದೆ ಅಂಗಡಿಗಳಲ್ಲಿ ಸಿಗುವ ರೆಡಿಮೇಡ್ ಗೂಡುದೀಪಗಳನ್ನು ಖರೀದಿಸಿ ಬೆಳಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹೆಚ್ಚು ಗಮನಸೆಳೆಯುತ್ತಿದೆ.
ಮೂರು ವಿಭಾಗದಲ್ಲಿ ಗಮನಸೆಳೆದ ಗೂಡುದೀಪಗಳು:ಈ ಬಾರಿ ಮೂರು ವಿಭಾಗದಲ್ಲಿ 500ಕ್ಕೂ ಅಧಿಕ ಗೂಡುದೀಪಗಳು ಸ್ಪರ್ಧೆಗೆ ಬಂದಿದ್ದವು. ಸಾಂಪ್ರದಾಯಿಕ ವಿಭಾಗದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಗೂಡುದೀಪಗಳು ಗಮನ ಸೆಳೆದವು. ಯಕ್ಷಗಾನವನ್ನು ಬಿಂಬಿಸುವ ಗೂಡುದೀಪಗಳು ಸೇರಿದಂತೆ ಈ ವಿಭಾಗದಲ್ಲಿ ಹಲವು ಗೂಡುದೀಪಗಳು ಆಕರ್ಷಿಸಿದವು.
ಇನ್ನು ಆಧುನಿಕ ವಿಭಾಗದಲ್ಲಿ ಬೇರೆ ಬೇರೆ ವಸ್ತುಗಳನ್ನು ಬಳಸಿ ಮಾಡಲಾದ ಗೂಡುದೀಪಗಳು ಗಮನ ಸೆಳೆದವು. ಗಾಳಿಮರದ ಒಣಗಿದ ಹಸಿಕಾಯಿ ಮತ್ತು ಗೆಲ್ಲುಗಳನ್ನು ಉಪಯೋಗಿಸಿ ತಯಾರಿಸಿದ ಗೂಡುದೀಪ, ಬೀಡಿ ಎಲೆಗಳಿಂದ ತಯಾರಿಸಲಾದ ಗೂಡುದೀಪಗಳು ಗಮನಸೆಳೆದವು. ಪ್ರತಿಕೃತಿ ವಿಭಾಗದಲ್ಲಿ ಚಂದ್ರಯಾನ, ಅಮೃತಸರ ದೇವಾಲಯ, ಕಾಶಿ ದೇವಾಲಯ ಮಾದರಿ ಗೂಡುದೀಪಗಳು ಗಮನಸೆಳೆದವು.
ಈ ಬಗ್ಗೆ ನಮ್ಮ ಕುಡ್ಲ ಸಂಸ್ಥೆ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರ ಮಾತನಾಡಿ, ಕಳೆದ 23 ವರ್ಷದಿಂದ ಈ ಗೂಡುದೀಪ ಸ್ಪರ್ಧೆ ನಡೆಸುತ್ತಾ ಬಂದಿದ್ದೇವೆ. ಈಗ ಮನೆಮನೆಯಲ್ಲಿ ಗೂಡುದೀಪ ರಚಿಸುವ ಕಲ್ಪನೆ ಹೋಗಿದೆ. ಈಗ ಅಂಗಡಿಯಿಂದ ತಂದು ಗೂಡುದೀಪ ಬೆಳಗುತ್ತಾರೆ. ಅದಕ್ಕಾಗಿ ಇದನ್ನು ಆರಂಭಿಸಿದ್ದೇನೆ. ದೀಪಾವಳಿ ಹಬ್ಬದಲ್ಲಿ ನಾವೆ ರಚಿಸಿದರೆ ಹೇಗೆ ಬರುತ್ತದೆ ಎಂಬುದು ಜಾಗೃತಿ ಮೂಡಿಸಲು ಇದನ್ನು ಆರಂಭಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮುಕೇಶ್ ಮಾತನಾಡಿ, ನಾವು ಮುಂಚೆ ಗೂಡುದೀಪ ನೋಡಲು ಬರುತ್ತಿದ್ದೇವೆ. ಈ ಬಾರಿ ಗೂಡುದೀಪ ಸ್ಫರ್ಧೆಯಲ್ಲಿ ಭಾಗವಹಿಸಿದ್ದೇವೆ. ನಾವು ಮಂಗಳೂರಿನ ಯಕ್ಷಗಾನವನ್ನು ಗೂಡುದೀಪದಲ್ಲಿ ತೋರಿಸಿದ್ದೇವೆ ಎಂದರು. ಗೂಡುದೀಪಗಳ ಸ್ಪರ್ಧೆಯನ್ನು ನೋಡಲು ನೂರಾರು ಮಂದಿ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿದ್ದರು.
ಇದನ್ನೂ ಓದಿ :ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ದೀಪಾವಳಿ ಸಂಭ್ರಮ: ದುಬಾರಿ ದರದ ನಡುವೆಯೂ ಭರ್ಜರಿ ವಹಿವಾಟು