ಮಂಗಳೂರು (ದಕ್ಷಿಣ ಕನ್ನಡ): ಜನವರಿ 18 ರಂದು ಪರ್ಯಾಯ ಮಹೋತ್ಸವ ನಡೆಯಲಿದ್ದು, ನಮ್ಮ ಪರ್ಯಾಯದಲ್ಲಿ ಕೋಟಿ ಗೀತಾ ಲೇಖನ ಯಜ್ಞ ನಡೆಸಲು ನಿರ್ಧರಿಸಲಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಜನವರಿ 18 ರಂದು ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕಲ್ಕೂರ ಪ್ರತಿಷ್ಠಾನದಿಂದ ಮಾಡಿದ ಗುರುವಂದನಾ, ನಾಣ್ಯಗಳ ತುಲಾಭಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
"ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಹಲವು ಯೋಜನೆಗಳನ್ನು ಮಾಡಿದ್ದೇವೆ. ಅದರಲ್ಲಿ ಕೋಟಿ ಗೀತಾ ಲೇಖನ ಯಜ್ಞ ಕೂಡ ಒಂದು. ನಮ್ಮ ಪರ್ಯಾಯ ಅವಧಿಯಲ್ಲಿ ಒಂದು ಕೋಟಿ ಭಗವದ್ಗೀತೆಯನ್ನು ಬರೆಸುವ ಯೋಜನೆಯಿದೆ. ಇದಕ್ಕಾಗಿ ಗೀತೆಯನ್ನು ಬರೆಯುವವರಿಗೆ ಮಠದಿಂದ ಪುಸ್ತಕ ಕೊಡಲಾಗುವುದು. ಅದನ್ನು ಪೂರ್ತಿ ಬರೆದು ತಂದ ಬಳಿಕ ಶ್ರೀ ಕೃಷ್ಣ ದೇವರ ಮುಂಭಾಗದಲ್ಲಿಟ್ಟು ಪೂಜಿಸಲಾಗುವುದು. ಈ ಪುಸ್ತಕವನ್ನು ಮತ್ತೆ ಬರೆದವರಿಗೆ ನೀಡಲಾಗುವುದು. ಅವರು ಅದನ್ನು ದೇವರ ಕೋಣೆಯಲ್ಲಿಡಬೇಕು. ಈ ಮೂಲಕ ಗೀತೆಯ ಪ್ರಸಾರವನ್ನು ಮಾಡುವ ಉದ್ದೇಶ ಹೊಂದಲಾಗಿದೆ" ಎಂದರು.