ಕರ್ನಾಟಕ

karnataka

ETV Bharat / state

ಮಂಗಳೂರು: ಸಮುದ್ರಪಾಲಾದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಮೃತದೇಹ ಪತ್ತೆ

Dead bodies of students found in Someshwar beach: ಉಳ್ಳಾಲದ ಸೋಮೇಶ್ವರ ಸಮುದ್ರದಲ್ಲಿ ಶನಿವಾರ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

Dead bodies found
ಮೃತದೇಹ ಪತ್ತೆ

By ETV Bharat Karnataka Team

Published : Dec 10, 2023, 12:47 PM IST

ಉಳ್ಳಾಲ(ದಕ್ಷಿಣ ಕನ್ನಡ):ಸೋಮೇಶ್ವರದ ಅಲಿಮಕಲ್ಲು ಸಮೀಪ ಶನಿವಾರ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಅದೇ ಪ್ರದೇಶದಲ್ಲಿ ಇಂದು ಬೆಳಿಗ್ಗೆ ದೊರೆತಿದೆ. ನಿನ್ನೆ ಸಂಜೆಯಿಂದ ಇಂದು ಬೆಳಗ್ಗಿನವರೆಗೂ ಸ್ಥಳೀಯ ಈಜುಗಾರರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್ (18) ಮೃತರೆಂದು ಗುರುತಿಸಲಾಗಿದೆ.

ಘಟನೆಯ ಸಂಪೂರ್ಣ ವಿವರ:ಸೋಮೇಶ್ವರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶ್ವಿತ್, ಯುವರಾಜ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನ 12.40ಕ್ಕೆ ಕಾಲೇಜು ಮುಗಿಸಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆಯಲ್ಲಿ ಪಾಲ್ಗೊಂಡ ಬಳಿಕ ದೇವಸ್ಥಾನದಲ್ಲಿ ಊಟ ಮುಗಿಸಿ ಅಲ್ಲೇ ಪಕ್ಕದ ಮರದಡಿಯಲ್ಲಿ ಕುಳಿತಿದ್ದರು. ಸುಮಾರು ಮೂರು ಗಂಟೆಯ ಬಳಿಕ ಸ್ಥಳೀಯ ಗೂಡಂಗಡಿಯಿಂದ ತಿಂಡಿ ತೆಗೆದುಕೊಂಡು ದೇವಸ್ಥಾನದಿಂದ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ.ಮೀ. ಸಮುದ್ರದ ಬದಿಯಲ್ಲೇ ನಡೆದುಕೊಂಡು ಹೋಗಿದ್ದರು. ಬಳಿಕ ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು.

ಈ ಸಂದರ್ಭದಲ್ಲಿ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು, ಕಲ್ಲಿನ ಸಮೀಪ ಹೋಗಿದ್ದರು. ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ನೀರಿನ ಸೆಳೆತಕ್ಕೆ ಸಿಕ್ಕಿದ್ದರು.

ರಕ್ಷಿಸಲು ಯತ್ನಿಸಿದ ಸಹಪಾಠಿಗಳು: ಇಬ್ಬರು ಸಹಪಾಠಿಗಳು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಕಂಡು ಅಲ್ಲೇ ಪಕ್ಕದ ಶೆಡ್‍ನಲ್ಲಿಟ್ಟಿದ್ದ ಟಯರ್ ಟ್ಯೂಬ್ ಬಳಸಿ ರಕ್ಷಣೆಗೆ ಯತ್ನಿಸಿದ್ದು, ರಕ್ಷಣೆ ಸಾಧ್ಯವಾಗದೆೇ ಇದ್ದಾಗ ಕಿರುಚಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಸಮುದ್ರ ಸೇರಿದ್ದು, ಸ್ಥಳೀಯ ಈಜುಗಾರರು ಆಗಮಿಸಿ ಶೋಧ ಆರಂಭಿಸಿದ್ದರು. ರಾತ್ರಿಯವರೆಗೂ ಹುಡುಕಾಡಿದರೂ ಇಬ್ಬರೂ ಪತ್ತೆಯಾಗಿರಲಿಲ್ಲ.

ಅಲಿಮಕಲ್ಲು ಪ್ರದೇಶ ಅಪಾಯಕಾರಿ:ಸೋಮೇಶ್ವರ ವ್ಯಾಪ್ತಿಯ ಸಮುದ್ರತೀರಕ್ಕೆ ಪ್ರವಾಸಿಗರು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಅಲ್ಲೇ ಸಮುದ್ರದ ತೆರೆಗಳೊಂದಿಗೆ ಆಟವಾಡಿ ತೆರಳುವುದು ಸಾಮಾನ್ಯ. ಈ ಪ್ರದೇಶದಲ್ಲಿ ಸ್ಥಳೀಯ ಜೀವರಕ್ಷಕ ಈಜುಗಾರರು ಮತ್ತು ತಟದಲ್ಲಿರುವ ಪೊಲೀಸ್​, ಗೃಹರಕ್ಷಕ ಸಿಬ್ಬಂದಿ ಸಮುದ್ರಕ್ಕಿಳಿಯುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುತ್ತಾರೆ.

ಉಚ್ಚಿಲ ಭಾಗದಲ್ಲಿರುವ ಅಲಿಮಕಲ್ಲು ಪ್ರದೇಶಕ್ಕೆ ಸೋಮೇಶ್ವರ ರುದ್ರಪಾದೆಯಿಂದ ಒಂದು ಕಿ.ಮೀ. ಅಂತರವಿದೆ. ಈ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆ. ಜೀವರಕ್ಷಕ ಈಜುಗಾರರು ಸ್ಥಳದಲ್ಲಿರುವುದಿಲ್ಲ. ಸೋಮೇಶ್ವರದ ಸಮುದ್ರ ತೀರಕ್ಕೆ ಹೆಚ್ಚು ಬಾರಿ ಹೋಗುವವರೇ ಅಲಿಮಕಲ್ಲು ಪ್ರದೇಶಕ್ಕೂ ತೆರೆಳುತ್ತಾರೆ. ಆದರೆ ಈ ಪ್ರದೇಶದಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತದ ಸಂದರ್ಭದಲ್ಲಿ ಸಮುದ್ರದ ಅಲೆಗಳು ಅಪಾಯಕಾರಿಯಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಲು ಇದೇ ಕಾರಣ ಎಂದು ಸ್ಥಳೀಯ ಈಜುಗಾರರು ತಿಳಿಸಿದ್ದಾರೆ.

ಇದನ್ನೂ ಓದಿ:ಉಳ್ಳಾಲ: ವಿಹಾರಕ್ಕೆಂದು ಬಂದಿದ್ದ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಮುದ್ರಪಾಲು

ABOUT THE AUTHOR

...view details