ಬೆಳ್ತಂಗಡಿ:ಕಳೆದ ವರ್ಷ ಪ್ರಕೃತಿ ವಿಕೋಪಕ್ಕೀಡಾದ ಪ್ರದೇಶಗಳ ಸ್ಥಿತಿಗತಿ ಪರಿಶೀಲನೆಗಾಗಿ ಹಾಗೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಂಗಳವಾರ ಚಾರ್ಮಾಡಿ ಘಾಟ್, ಪರ್ಲಾಣಿ, ಅನ್ನಾರು ಪ್ರದೇಶಗಳಿಗೆ ಭೇಟಿ ನೀಡಿ, ಬಳಿಕ ಬೆಳ್ತಂಗಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಕಳೆದ ವರ್ಷ ಮಳೆಗಾಲದ ಸಂದರ್ಭ ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಹಾಗೂ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕುಸಿತ ಉಂಟಾಗಿತ್ತು. ಘಾಟ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ತಡೆಗೋಡೆಗಳ ಕುಸಿತದಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಜಿಲ್ಲಾಧಿಕಾರಿಯವರು ಚಾರ್ಮಾಡಿ ಘಾಟ್ ರಸ್ತೆಯ ಕಾಮಗಾರಿ ವೀಕ್ಷಿಸಿದ ಬಳಿಕ ಪ್ರವಾಹದಿಂದ ಹಾನಿಗೀಡಾದ ಪರ್ಲಾಣಿ-ಹೊಸಮಠ ಸೇತುವೆ ಹಾಗೂ ಅನ್ನಾರು ಸೇತುವೆ ಪ್ರದೇಶಕ್ಕೆ ಭೇಟಿ ನೀಡಿದರು. ಅನ್ನಾರು ಬಳಿ ನೂತನ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಫರ್ಲಾಣಿಯಲ್ಲಿ ಮೃತ್ಯುಂಜಯ ನದಿಯಿಂದ ಮರಳುಗಾರಿಕೆ ನಡೆಸುವುದರಿಂದ ಚಾರ್ಮಾಡಿ-ಫರ್ಲಾಣಿ ರಸ್ತೆ ಸಂಪರ್ಕ ಹದಗೆಟ್ಟಿರುವ ಕುರಿತು ಊರವರು ಪ್ರತಿಭಟಿಸಿದರು. ಇಲ್ಲಿಗೆ ಭೇಟಿ ನೀಡಿದ್ದ ಡಿಸಿಯವರು ಕೂಡಲೇ ರಸ್ತೆ ದುರಸ್ತಿ ಪಡಿಸಿ ಮರಳುಗಾರಿಕೆ ಮುಂದುವರಿಸುವಂತೆ ಪರವಾನಿಗೆಯನ್ನು ಪಡೆದುಕೊಂಡವರಿಗೆ ಆದೇಶಿಸಿದರು.