ಮಂಗಳೂರು: ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ ಎಂಬ ನಟ ಚೇತನ್ ಅವರ ಹೇಳಿಕೆಯನ್ನು ಸ್ವತಃ ದೈವ ನರ್ತಕರು ಆಗಿರುವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಖಂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಟ ಚೇತನ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದು ಶೋಷಿತರ ಮೇಲಾಗುವ ತುಳಿತ. ದೈವಾರಾಧನೆ ಮಾಡುವ ನಲಿಕೆ, ಪಂಬಂದ, ಪರವ ಸಮುದಾಯವರು ಹಿಂದೂ ಧರ್ಮದವರು ಎಂದು ದಾಖಲೆಗಳಲ್ಲಿದೆ. ಚೇತನ್ ಯಾರು ನಮಗೆ ಸರ್ಟಿಫಿಕೇಟ್ ಕೊಡುವುದಕ್ಕೆ? ಎಂದು ಪ್ರಶ್ನಿಸಿದ್ದಾರೆ.
ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿದ ದೈವ ನರ್ತಕ ದಯಾನಂದ ಜಿ. ಕತ್ತಲ್ ಸಾರ್ ದೈವರಾಧಾನೆಯಲ್ಲಿ 16 ಸಮುದಾಯಗಳು ಬರುತ್ತದೆ. ಎಲ್ಲರೂ ಸಮಾನರೇ ಆಗಿದ್ದಾರೆ. ಅದು ಬಿಟ್ಟು ನಮ್ಮನ್ನು ಹೊರಗಿಡುವುದು ಅಕ್ಷಮ್ಯ ಅಪರಾಧ. ದೈವಾರಾಧನೆಯ ಸಂಧಿ ಪಾಡ್ದನಗಳಲ್ಲಿ ಶಿವ, ಪಾರ್ವತಿ, ವಿಷ್ಣುವಿನ ಉಲ್ಲೇಖವಿದೆ. ಇಷ್ಟೆಲ್ಲಾ ಇರುವಾಗ ಯಾಕೆ ನಮ್ಮನ್ನು ಹಿಂದೂ ಧರ್ಮದಿಂದ ಹೊರಗೆ ಇಡುತ್ತೀರಿ. ನಾನು 37 ವರ್ಷಗಳಿಂದ ದೈವಾರಾಧನೆ ಮಾಡುತ್ತಿದ್ದೇನೆ. ದೈವಾರಾಧನೆಯನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿಯೇ ಹೇಳುತ್ತಿದ್ದೇನೆ. ಆದ್ದರಿಂದ ನಟ ಚೇತನ್ ಹೇಳಿಕೆ ತಪ್ಪು. ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದರು.
ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿಕೆ ನಿಜವಲ್ಲ ಎಂದು ನಟ ಚೇತನ್ ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಕಾಂತಾರ ಸಿನಿಮಾ ವೀಕ್ಷಿಸಿದ ಅವರು ತಮ್ಮ ಟ್ವೀಟ್ನಲ್ಲಿ 'ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ. ಅದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನದ್ದಾಗಿದೆ. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕು ಎಂದು ಕೇಳುತ್ತೇವೆ' ಎಂದು ಬರೆದಿದ್ದರು.
ಇದನ್ನೂ ಓದಿ:ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಿಂದುತ್ವ ಹೇರಿಕೆಯನ್ನೂ ಒಪ್ಪಲಾಗಲ್ಲ: ನಟ ಚೇತನ್