ಕರ್ನಾಟಕ

karnataka

ETV Bharat / state

ಇಂದಿನಿಂದ ಎನ್​ಐಟಿಕೆ ಟೋಲ್​ಗೇಟ್ ವಿರುದ್ದ ಹಗಲು ರಾತ್ರಿ ಧರಣಿ.. 144 ಸೆಕ್ಷನ್ ಜಾರಿಗೊಳಿಸಿದ ಕಮಿಷನರ್ - ಸುರತ್ಕಲ್ ಟೋಲ್‍ಗೇಟ್ ವಿರೋಧಿ ಹೋರಾಟ

ಸುರತ್ಕಲ್ ಟೋಲ್​ ಗೇಟ್ ತೆರವು ಮಾಡುವಂತೆ ಇತ್ತೀಚೆಗೆ ನಡೆದ ಮುತ್ತಿಗೆ ಕಾರ್ಯಕ್ರಮದಲ್ಲಿ ಪೊಲೀಸರ ಸರ್ಪಗಾವಲನ್ನು ಭೇದಿಸಿ ಮುತ್ತಿಗೆ ಹಾಕಿ ಕೆಲಹೊತ್ತು ಟೋಲ್ ಸಂಗ್ರಹ ತಡೆಯುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದರು.

Day and night protest against NITK tollgate
ಎನ್​ಐಟಿಕೆ ಟೋಲ್​ಗೇಟ್ ವಿರುದ್ದ ಹಗಲು ರಾತ್ರಿ ಧರಣಿ

By

Published : Oct 28, 2022, 7:09 AM IST

ಮಂಗಳೂರು:ಮಂಗಳೂರಿನ ಸುರತ್ಕಲ್ ಎನ್​ಐಟಿಕೆ ಟೋಲ್ ​ಗೇಟ್ ವಿರುದ್ಧ ಸುರತ್ಕಲ್ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಇಂದಿನಿಂದ ಹಗಲು ರಾತ್ರಿ ಧರಣಿಯನ್ನು ಅನಿರ್ಧಿಷ್ಟಾವಧಿಯವರೆಗೆ ನಡೆಸಲು ನಿರ್ಧರಿಸಿದ್ದು , ಇದರ ನಡುವೆ ಟೋಲ್​ ಗೇಟ್ ಸುತ್ತಲೂ ಮಂಗಳೂರು ನಗರ ಪೊಲೀಸ್ ಕಮಿಷನರ್ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಸುರತ್ಕಲ್ ಟೋಲ್​ ಗೇಟ್ ತೆರವು ಮಾಡುವಂತೆ ಇತ್ತೀಚೆಗೆ ನಡೆದ ಮುತ್ತಿಗೆ ಕಾರ್ಯಕ್ರಮದಲ್ಲಿ ಪೊಲೀಸರ ಸರ್ಪಗಾವಲನ್ನು ಭೇದಿಸಿ ಮುತ್ತಿಗೆ ಹಾಕಿ ಕೆಲಹೊತ್ತು ಟೋಲ್ ಸಂಗ್ರಹ ತಡೆಯುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದರು. ಇದರ ಬಳಿಕ ಇಂದಿನಿಂದ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲು ಹೋರಾಟಗಾರರು ನಿರ್ಧರಿಸಿದ್ದರು.

ನಿನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿದೆ. ಆದ್ದರಿಂದ ಸರ್ಕಾರ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವವರೆಗೂ ಧರಣಿಯನ್ನು ಮುಂದೂಡುವಂತೆ ಸುರತ್ಕಲ್ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿಯ ಸದಸ್ಯರಿಗೆ ಸಲಹೆ ನೀಡಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮತಿ ನೀಡಿದ್ದು, ಗೆಜೆಟ್ ನೋಟಿಫಿಕೇಷನ್ ಬಾಕಿ ಉಳಿದಿದೆ. ಆದರೆ‌, ನೋಟಿಫಿಕೇಷನ್ ಆಗುವ ದಿನಾಂಕವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಟೋಲ್ ಗೇಟ್ ಹೋರಾಟ ಸಮಿತಿಯವರು ಯಾವುದೇ ರೀತಿಯ ಧರಣಿಗಳನ್ನು ಕೈಗೊಳ್ಳದಂತೆ ಕೋರಿದ್ದರು.

ಆದರೆ, ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಎನ್ಎಚ್ಎಐ ಅಧಿಕಾರಿ ಲಿಂಗೇಗೌಡ ಅವರು ಟೋಲ್ ತೆಗೆಯಲು ಕೇಂದ್ರ ಮಂತ್ರಿಗಳ ಆದೇಶ ಹಾಗೂ ಫೈಲ್ ಮೂವ್​ಮೆಂಟ್ ಬಗ್ಗೆ ವಿವರ ನೀಡಿ, ಪುನಃ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಜಿಲ್ಲಾಧಿಕಾರಿ ಕೂಡಾ ಧರಣಿ ಕೈಬಿಡಲು ವಿನಂತಿಸಿದ್ದಾರೆ. ಆದರೆ, ಹೋರಾಟ ಸಮಿತಿ ನಿರ್ಣಯದಂತೆ ಇಂದಿನಿಂದ ಧರಣಿ ಮಾಡಲಾಗುವುದು. ಟೋಲ್ ತೆರವಿನ ಆದೇಶ ಬಂದರೆ ಧರಣಿ ನಿಲ್ಲಿಸಲಾಗುವುದು ಎಂದು ತಿಳಿಸಿದೆ.

ಇದೀಗ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಅಕ್ಟೋಬರ್ 28 ರ ಬೆಳಗ್ಗೆ 6 ಗಂಟೆಯಿಂದ ಅ.3 ರ ಸಂಜೆ 6 ರವರೆಗೆ ಎನ್.ಐ.ಟಿ.ಕೆ ಟೋಲ್ ಗೇಟ್ ಸುತ್ತಮುತ್ತಲು 200 ಮೀಟರ್‌ ವ್ಯಾಪ್ತಿಯನ್ನು ಸಂಪೂರ್ಣ ನಿಷೇಧಿತ ಪ್ರದೇಶವೆಂದು ಘೋಷಿಸಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ:ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅಕ್ಟೋಬರ್ 28 ಅನಿರ್ಧಿಷ್ಟಾವಧಿ ಮುಷ್ಕರ

ABOUT THE AUTHOR

...view details