ಸಾಲ ಮರುಪಾವತಿ ಮಾಡದ ಪುತ್ತೂರಿನ ದರ್ಬೆ ಫೋರಮ್ ಹೈಟ್ಸ್ ಸೀಸ್ ಮಾಡಲು ಬಂದ ಎಸ್‍ಸಿಡಿಸಿಸಿ ಬ್ಯಾಂಕ್ ತಂಡದೊಂದಿಗೆ ಕಟ್ಟಡಕ್ಕೆ ಸಂಬಂಧಿಸಿದವರ ಮಾತಿನ ಚಕಮಕಿ ಪುತ್ತೂರು (ದಕ್ಷಿಣ ಕನ್ನಡ):ಸಾಲ ಮರುಪಾವತಿ ಮಾಡದ ಪುತ್ತೂರಿನ ದರ್ಬೆ ಫೋರಮ್ ಹೈಟ್ಸ್ ಸೀಜ್ ಮಾಡಲು ಬಂದ ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕರ, ಅಧಿಕಾರಿಗಳು ಮತ್ತು ಕಟ್ಟಡಕ್ಕೆ ಸಂಬಂಧಿಸಿದವರ ನಡುವೆ ಮಾತಿನ ಚಕಮಕಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮುಖ್ಯ ಶಾಖೆಯ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ದರ್ಬೆ ಫೋರಮ್ ಹೈಟ್ಸ್, ಮೇ ಸಹದ್ ರೆಂಟಲ್ ಪ್ರೈ.ಲಿ ಅವರು ಪಡೆದದಿದ್ದರು. ನಂತರ ಸಾಲವನ್ನು ಪಡೆದು ನಾಲ್ಕೈದು ವರ್ಷವಾದರೂ ಹಣವನ್ನು ಮರುಪಾವತಿಸಿಲ್ಲ. ಈ ಹಿನ್ನೆಲೆ ಕಾನೂನಾತ್ಮಕವಾಗಿ ಕಟ್ಟಡವನ್ನು ಸೀಜ್ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಸ್ಥಳಕ್ಕೆ ಆಗಮಿಸಿದ್ದರು.
ಈ ಸಂದರ್ಬದಲ್ಲಿ ಕೆಲ ಕಾಲದವರೆಗೆ ಕಟ್ಟಡಕ್ಕೆ ಸಂಬಂಧಿಸಿದವರ ಮತ್ತು ಬ್ಯಾಂಕ್ ನಿರ್ದೇಶಕರು, ಅಧಿಕಾರಿ ವರ್ಗದವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಮೇ ಸಹದ್ ರೆಂಟಲ್ ಪ್ರೈ ಲಿ ಇವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಪುತ್ತೂರು ಮುಖ್ಯಶಾಖೆಯಿಂದ ಪಡೆದ ಸಾಲವನ್ನು ಮರುಪಾವತಿಸಿಲ್ಲ ಎಂದು 2022ರ ಅ.28ರಂದು ಕಟ್ಟಡವನ್ನು ಬಹಿರಂಗವಾಗಿ ಹರಾಜು ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಬಿಡ್ಡುದಾರರಾಗಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರು ರೂ. 13.5 ಕೋಟಿಗೆ ಸ್ಥಿರಾಸ್ತಿಯನ್ನು ಬಿಡ್ಡುದಾರರಾಗಿ ಖರೀದಿ ಮಾಡಿದ್ದರು.
ಇದನ್ನು 2022ರ ಡಿ.22ರಂದು ಸಹಕಾರ ಸಂಘಗಳ ಸಹಾಯಕ ನಿರ್ಬಂಧಕರ ಮತ್ತು ವಸೂಲಾತಿ ಅಧಿಕಾರಿಗಳ ನ್ಯಾಯಾಲಯದಲ್ಲಿ ಮಾರಾಟ ಸ್ಥಿರೀಕರಣ ಆದೇಶ ನೀಡಲಾಗಿತ್ತು. ಡಿ.26ರಂದು ಪುತ್ತೂರು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರ ಹೆಸರಿಗೆ ನೋಂದಾಣೆ ಮಾಡಲಾಗಿತ್ತು. ಆ ಬಳಿಕ ಕಟ್ಡವನ್ನು ಸ್ವಾಧೀನತೆ ಮಾಡುವ ನಿಟ್ಟನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧಿಕಾರಿಗಳು ಮತ್ತು ನಿರ್ದೇಶಕರು ಪೊಲೀಸ್ ಬಂದೋಬಸ್ತ್ನೊಂದಿಗೆ ಸ್ಥಳಕ್ಕೆ ಆಗಮಿಸಿದಾಗ ಕಟ್ಟಡಕ್ಕೆ ಸಂಬಂಧಿಸಿದವರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಕಟ್ಟಡವನ್ನು ಬಿಡ್ಡುದಾರರ ವಶಕ್ಕೆ ಕೊಡಲು ನೋಟಿಸ್ :ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್‍ಸಿಡಿಸಿಸಿ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಸಾಲವನ್ನು ಮರುಪಾವತಿಸದ ಹಿನ್ನೆಲೆಯಲ್ಲಿ ಕಟ್ಟಡ ಏಲಂ ಮಾಡಲಾಗಿದೆ. ಇದೀಗ ಏಲಂನಲ್ಲಿ ಖರೀದಿಸಿದವರಿಗೆ ಕಟ್ಟಡವನ್ನು ಬಿಟ್ಟು ಕೊಡಬೇಕಾಗಿದ್ದು, ಈ ನಿಟ್ಟಿನಲ್ಲಿ ಇಡಿ ಕಟ್ಟಡಗಳಿಗೆ ನೋಟಿಸ್ ನೀಡಿ 7 ದಿನಗಳ ಬಳಿಕ ಕೊಡುವಂತೆ ತಿಳಿಸಿದ್ದೇವೆ. ಈಗಾಗಲೇ ಬಂದ್ ಆಗಿರುವ ಕೋಣೆಗಳಿಗೆ ಬೀಗ ಹಾಕಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸೇಲ್ಸ್ ಆಫೀಸರ್ ಪ್ರಮೋದ್ ಕುಮಾರ್ ಜೈನ್, ಜೋವಲ್ ಪ್ರಕಾಶ್ ಡಿ'ಸೋಜ, ಹಿರಿಯ ನಿರೀಕ್ಷಕ ವಿಶ್ವನಾಥ ಶೆಟ್ಟಿ, ರಿಕವರಿ ಡೆವೆಲಪರ್ಸ್ ಆದರ್ಶ ವಿ ಪುತ್ತೂರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಘಟನೆಯಲ್ಲಿ ಅಹಿತಾಕರ ಘಟನೆ ಸಂಭವಿಸದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತ್ ಒದಗಿಸಿದರು.
ಇದನ್ನೂ ಓದಿ :ಕುಣಿಗಲ್ ಶಾಸಕ ರಂಗನಾಥ್, ಪೊಲೀಸ್ ಅಧಿಕಾರಿ ನಡುವೆ ಮಾತಿನ ಚಕಮಕಿ