ಕರ್ನಾಟಕ

karnataka

ETV Bharat / state

ಬಂಟ್ವಾಳದಲ್ಲಿ ವ್ಯಾಪಕ ಮಳೆ: ಗುಡ್ಡ ಜರಿದು ಮನೆಗಳಿಗೆ ಹಾನಿ - Bantwal rain news

ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡ ಕುಸಿದು ಹಲವಾರು ಮನೆಗಳಿಗೆ ಹಾನಿಯಾಗಿದೆ. ಜೊತೆಗೆ ಹೊಂಡಗಳಿಂದ ಕೂಡಿರುವ ಹೆದ್ದಾರಿಯಲ್ಲಿ ಸಂಚಾರ ದುಸ್ತರವಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಪಾಯದ ಮಟ್ಟ 8.5 ಮೀಟರ್​ಗೆ ಒಂದೂವರೆ ಮೀಟರ್ ಅಷ್ಟೇ ಬಾಕಿ ಇದೆ.

ತುಂಬಿ ಹರಿಯುತ್ತಿರುವ ನೇತ್ರಾವತಿ
ತುಂಬಿ ಹರಿಯುತ್ತಿರುವ ನೇತ್ರಾವತಿ

By

Published : Sep 20, 2020, 8:05 PM IST

ಬಂಟ್ವಾಳ:ಕಳೆದ ಎರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಹಲವೆಡೆ ವ್ಯಾಪಕ ಹಾನಿಯುಟಾಂಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಯಿಂದಾಗಿ ಕೆಲವೆಡೆ ಗುಡ್ಡ ಕುಸಿದು ತೊಂದರೆಗಳುಂಟಾಗಿದ್ದರೆ, ಇನ್ನು ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ. ರಸ್ತೆ ಬದಿಯಲ್ಲಿದ್ದ ಮಣ್ಣು ರಸ್ತೆ ಮಧ್ಯಕ್ಕೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದರೆ, ಹೊಂಡಗಳಿಂದ ಕೂಡಿರುವ ಹೆದ್ದಾರಿಯಲ್ಲಿ ಸಂಚಾರ ದುಸ್ತರವಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಪಾಯದ ಮಟ್ಟ 8.5 ಮೀಟರ್​ಗೆ ಒಂದೂವರೆ ಮೀಟರ್ ಅಷ್ಟೇ ಬಾಕಿ ಇದೆ. ಭಾನುವಾರ ಬೆಳಗ್ಗೆ ನೀರಿನ ಮಟ್ಟ 7.2 ಮೀಟರ್ ಇದ್ದು. ಮಧ್ಯಾಹ್ನದ ವೇಳೆ 6.9 ಮೀಟರ್​​ ಆಗಿದೆ. ತುಂಬೆಯಲ್ಲಿ ಸಂಜೆ ವೇಳೆ ನೀರಿನ ಮಟ್ಟ 5.6 ಮೀಟರ್ ಇತ್ತು.

ಗುಡ್ಡ ಜರಿದು ಮನೆಗಳಿಗೆ ಹಾನಿ

ಎಲ್ಲೆಲ್ಲಿ ಹಾನಿ:

ವಿಟ್ಲ ಪಡ್ನೂರು ಗ್ರಾಮದ ಬನಾರಿ ಬಾಬಟ್ಟ ಎಂಬಲ್ಲಿ ಅಬ್ದುಲ್ ಯಾನೆ, ಅಬ್ದುಲ್ ರಜಾಕ್ ಎಂಬುವರ ಮನೆಯ ಮೇಲೆ ಮರ ಬಿದ್ದು, ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಇವರ ಮನೆಯಲ್ಲಿ ಮಕ್ಕಳು ಸೇರಿ 6 ಜನರಿದ್ದು, ಇದರಲ್ಲಿ ಇಬ್ಬರು ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವಿಟ್ಲ ಸಮುದಾಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಇವರ ಮನೆ ಪಕ್ಕದಲ್ಲಿ ವೆಂಕಪ್ಪ ಸಪಲ್ಯ ಅವರ ಮನೆ ಇದ್ದು, ಮನೆ ಖಾಲಿ ಮಾಡಿಸಿ ಹಮೀದ್ ಎಂಬುವರ ಮನೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಎರಡು ಮನೆಗಳ ನಡುವಿನ ಬರೆ ಶನಿವಾರ ರಾತ್ರಿ ಕುಸಿದುಬಿದ್ದಿದೆ. ಜೊತೆಗೆ ಸಜೀಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಅಮೀನಾ ಎಂಬುವರ ಮನೆಯ ಒಂದು ಪಾರ್ಶ್ವ ಕುಸಿದಿದ್ದು, ಮನೆಗೆ ಹಾನಿಯಾಗಿದೆ. ಮನೆಮಂದಿಯನ್ನು ಮತ್ತೊಂದು ಮನೆಗೆ ಸ್ಥಳಾಂತರಿಸಲಾಗಿದೆ. ಶನಿವಾರದಿಂದಲೇ ಸುರಿಯುತ್ತಿರುವ ಭಾರಿ ಮಳೆಗೆ ಭಾನುವಾರ ಸಾಲೆತ್ತೂರು ಕಟ್ಟೆ ಮಸೀದಿ ಬಳಿ ರಸ್ತೆಬದಿ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲೋಕೋಪಯೋಗಿ ಇಲಾಖೆಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದು, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅಮ್ಟಾಡಿ ಗ್ರಾಮದ ಏರ್ಯ ಎಂಬಲ್ಲಿ ಆರತಿ ಶೆಟ್ಟಿ ಎಂಬುವರ ಮನೆಯ ಹಿಂಭಾಗ ಕಂಪೌಂಡ್ ಜರಿದು ಬಿದ್ದಿದೆ. ಕಳ್ಳಿಗೆ ಗ್ರಾಮದ ಸುಂದರ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಸಾಲೆತ್ತೂರು ಗ್ರಾಮದ ರಾಮಣ್ಣ ಶೆಟ್ಟಿ ಎಂಬುವರ ವಾಸ್ತವ್ಯದ ಪಕ್ಕಾ ಮನೆಗೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಹೀಗೆ ಹಲವರ ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ.

ABOUT THE AUTHOR

...view details