ಪುತ್ತೂರು: ಸರ್ಕಾರಿ ಮತ್ತು ಸರ್ಕಾರಿದ ಅಧೀನ ಇಲಾಖೆಗಳಲ್ಲಿ ದುಡಿಯುತ್ತಿರುವ ಡಿ ಗ್ರೂಪ್ ನೌಕರರರನ್ನು ಖಾಯಂಗೊಳಿಸುವುದು, ಡಿಸಿ ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಯಾಯ ಗ್ರಾಮಗಳಲ್ಲಿ ಹಂಚುವುದು, ಪುತ್ತೂರಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು, ಕಾಲೋನಿಗಳಿಗೆ ರಸ್ತೆ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖೆಯ ನೇತೃತ್ವದಲ್ಲಿ ಸೋಮವಾರ ಪುತ್ತೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ದಲಿತ್ ಸೇವಾ ಸಮಿತಿಯ ಅಧ್ಯಕ್ಷ, ಸೇಸಪ್ಪ ಬೆದ್ರಕ್ಕಾಡು, ಡಿಸಿ ಮನ್ನಾ ಭೂಮಿಯನ್ನು ಅಲ್ಪ ಪ್ರಮಾಣದಲ್ಲಿ ಹಂಚಲಾಗಿದೆಯೇ ಹೊರತು ಹೆಚ್ಚಿನ ಕಡೆಗಳಲ್ಲಿ ಬಾಕಿ ಉಳಿಸಿಕೊಳ್ಳಲಾಗಿದೆ. ಹೆಚ್ಚಿನ ಹಳ್ಳಿಗಳ ಕಾಲೋನಿಗಳಿಗೆ ರಸ್ತೆ ಸೌಕರ್ಯವಿಲ್ಲ, ರಸ್ತೆಗಳಿದ್ದರೂ ಅಭಿವೃದ್ಧಿ ಪಡಿಸುವ ಕೆಲಸ ನಡೆದಿಲ್ಲ. ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ಕೇವಲ ರೂ.10 ಲಕ್ಷ ಅನುದಾನ ನೀಡಿ ಕೈತೊಳೆಯುವ, ರಸ್ತೆ ಅಭಿವೃದ್ಧಿಗೆ ಅನುದಾನ ಬಂದಿದೆ ಎಂದು ಬ್ಯಾನರ್ ಅಳವಡಿಸಿ ಪೋಸ್ ಕೊಡುವ ಕೆಲಸ ಆಗುತ್ತಿದೆ. ಡಿ ಗ್ರೂಪ್ ಹೊರಗುತ್ತಿಗೆ ನೌಕರರಿಗೆ ಸಮಾನ ಸಂಬಳ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ನಮ್ಮ ಬೇಡಿಕೆಗಳಿಗೆ ಸಂಬಂಧಿಸಿ ವಿಧಾನಸಭೆಯಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.