ಕರ್ನಾಟಕ

karnataka

ETV Bharat / state

ದ.ಕನ್ನಡ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ: ಡಿಸಿ ಮೇಲೆ ಭೋಜೇಗೌಡ ಗರಂ - ಕೆಡಿಪಿ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಜಿಲ್ಲಾಧಿಕಾರಿಗಳ ಮೇಲೆ ಗರಂ ಆದ ಪ್ರಸಂಗ ನಡೆದಿದೆ.

Etv Bharatdakshina-kannada-zilla-panchayat-kdp-meeting
ದ.ಕನ್ನಡ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ: ಡಿಸಿ ಮೇಲೆ ಭೋಜೇಗೌಡ ಗರಂ

By ETV Bharat Karnataka Team

Published : Jan 12, 2024, 11:02 PM IST

ದ.ಕನ್ನಡ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಜಿಲ್ಲಾಧಿಕಾರಿಗಳ ಮೇಲೆ ಗರಂ ಆದ ಪ್ರಸಂಗ ನಡೆಯಿತು. ಸಭೆ ಆರಂಭವಾಗಿ ಸ್ವಲ್ಪ ಸಮಯ ಆಗುತ್ತಿದ್ದಂತೆ, ಕಳೆದ ಬಾರಿ ನಡೆದ ಕೆಡಿಪಿ ಸಭೆಯ ಅನುಪಾಲನ ವರದಿಯೇ ತನಗೆ ಕಳಿಸಿಲ್ಲ ಎಂದು ಎಂಎಲ್​ಸಿ ಭೋಜೇಗೌಡ ಅವರು ಗರಂ ಆದರು. ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾದ ಭೋಜೇಗೌಡರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. 'ನಿಮ್ಮ ಕೆಲಸವೇನು, ಮೂರು ದಿನಗಳ ಹಿಂದೆ ಕಳಿಸಿದ್ದರೆ, ಅದನ್ನು ಓದುವುದು ಹೇಗೆ?. ಕೆಡಿಪಿ ಸಭೆ ನಡೆದು ಎಷ್ಟು ಸಮಯವಾಯ್ತು?' ಎಂದು ಪ್ರಶ್ನಿಸಿದರು.

ಇ-ಮೇಲ್ ಮೂಲಕ ಎಲ್ಲಾ ಎಂಎಲ್ಎಗಳಿಗೆ ವರದಿ ಕಳಿಸಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಎಷ್ಟು ದಿನಗಳ ಒಳಗೆ ಕಳಿಸಬೇಕೆಂಬ ನಿಯಮವಿದೆ ಎಂದು ಭೋಜೇಗೌಡರು ಪ್ರಶ್ನಿಸಿದರು‌. ಮುಂದಿನ ಬಾರಿ ಈ ರೀತಿ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈ ಬಾರಿ ಸಭೆ ಆದ ತಕ್ಷಣ ಸಚಿವರ ಸಹಿ ಹಾಕಿಸಿ ಎಲ್ಲರಿಗೂ ಕಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಶಾಸಕರಾದ ಅಶೋಕ್ ರೈ - ವೇದವ್ಯಾಸ ಕಾಮತ್ ನಡುವೆ ವಾಕ್ಸಮರ: ಕೆಡಿಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ರೈ - ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ನಡುವೆ ಜಟಾಪಟಿ ನಡೆದಿದೆ. ಈ ಸಭೆಯಲ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಸರಿಯಿಲ್ಲ ಎಂಬ ವಿಚಾರದಲ್ಲಿ ಶಾಸಕರಿಬ್ಬರ ನಡುವೆ ವಾಕ್ಸಮರ ನಡೆಯಿತು. ಮಾತಿಗೆ ಮಾತು ಬೆಳೆದು ಶಾಸಕ ವೇದವ್ಯಾಸ ಕಾಮತ್ ಅವರು, ಅಶೋಕ್ ರೈಯವರಿಗೆ 'ನೀವು ಶಾಸಕರಾಗಿ ಏಳು ತಿಂಗಳಾಗಿದ್ದು, ಸರಿಯಾದ ಮಾಹಿತಿ ತಿಳಿದುಕೊಂಡು ಮಾತನಾಡಿ ಎಂದರು. ಅದಕ್ಕೆ ಠಕ್ಕರ್ ನೀಡಿದ ಶಾಸಕ ಅಶೋಕ್ ರೈಯವರು "ನೀವು ಐದು ವರ್ಷಗಳಿಂದ ಶಾಸಕರಾಗಿದ್ದೀರಿ ಎಂದರೆ ಪಿಹೆಚ್​ಡಿ ಮಾಡಿದ್ದೀರಿ ಅಂಥ ಅಂದ್ಕೊಂಡ್ರಾ ಎಂದು ತಿರುಗೇಟು ನೀಡಿದ್ದಾರೆ.

ಕಳೆದ ಐದು ವರ್ಷ ಬಿಜೆಪಿ ಸರ್ಕಾರ ಇದ್ದಾಗಲೂ ಡಯಾಲಿಸಿಸ್ ವ್ಯವಸ್ಥೆ ಸರಿ ಇರಲಿಲ್ಲ. ಈಗ ಡಯಾಲಿಸಿಸ್ ಸರಿಯಾಗಿದೆ. ಸಮಸ್ಯೆ ಇದ್ದುದನ್ನು ಸರಿಪಡಿಸಿದ್ದೇವೆ ಎಂದು ಅಶೋಕ ರೈ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವೇದವ್ಯಾಸ ಕಾಮತ್ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಸರಿಯಾಗಿತ್ತು. ಈಗಿರುವ ಎಂಟು ಯಂತ್ರಗಳಲ್ಲಿ ಎಷ್ಟು ಸರಿಯಿದೆ. ನಮ್ಮ ಸರ್ಕಾರವಿದ್ದಾಗ 9 ಡಯಾಲಿಸಿಸ್ ಯಂತ್ರಗಳು ಚಾಲನೆಯಲ್ಲಿತ್ತು‌. ಈಗ ಮೂರು ಯಂತ್ರಗಳಷ್ಟೇ ಸರಿಯಿದ್ದು ರೋಗಿಗಳು ಪರದಾಡುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ‌. ಈ ವೇಳೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಮಾಧಾನ ಮಾಡಿದರೂ ಇಬ್ಬರೂ ಶಾಸಕರು ನಡುವಿನ ಜಟಾಪಟಿ ಮುಂದುವರಿದಿತ್ತು.

ಕೋಳಿ ಅಂಕಕ್ಕೆ ಅನುಮತಿಗೆ ಶಾಸಕ ಹರೀಶ್ ಪೂಂಜಾ ಒತ್ತಾಯ:ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ ಶಾಸಕ ಹರೀಶ್ ಪೂಂಜಾ ಕೆಡಿಪಿ ಸಭೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ - ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ನಿಮಿತ್ತ ಕೋಳಿ ಅಂಕ ನಡೆಯುತ್ತದೆ. ಪರಂಪರೆಯಿಂದ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ ಹರೀಶ್ ಪೂಂಜಾ ಮನವಿ ಮಾಡಿದರು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಪ್ರತಿಕ್ರಿಯಿಸಿ, ಕಾನೂನಿನಲ್ಲಿ ಕೋಳಿ ಅಂಕಕ್ಕೆ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ. ಆದರೆ ಹಿಂದಿನಿಂದಲೂ ಬಂದ ಸಂಪ್ರದಾಯದ ಹಿನ್ನೆಲೆಯಲ್ಲಿ ಕೋಳಿ ಅಂಕ ನಡೆಸಬಹುದು. ಪರಂಪರೆಯ ಕೋಳಿ ಅಂಕಕ್ಕೆ ಅನುಮತಿ ಬೇಕಿಲ್ಲ. ಆದರೆ ಐದು ಆರು ದಿನಗಳ ಕಾಲ ಕೋಳಿ ಅಂಕ ನಡೆಸಬಾರದು ಎಂದು ಹೇಳಿದರು.

ಇದನ್ನೂ ಓದಿ:ಬಂಟ್ವಾಳ: ಬೆಳಗ್ಗೆ ಮನೆಗೆ ನುಗ್ಗಿದ ಆಗಂತುಕರು; ತಾಯಿ ಮಗಳಿಗೆ ಚಾಕು ತೋರಿಸಿ ದರೋಡೆ

ABOUT THE AUTHOR

...view details