ಕರ್ನಾಟಕ

karnataka

By

Published : Aug 18, 2023, 8:13 PM IST

Updated : Aug 20, 2023, 9:41 AM IST

ETV Bharat / state

ನಕಲಿ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ನಡೆಸಿದ ಹ್ಯಾಕರ್​: ರಿಯಾದ್​ನಲ್ಲಿ ಕಡಬದ ಯುವಕ ಜೈಲುಪಾಲು

Dakshina Kannada youth languishing in Riyadh Jail: ದಕ್ಷಿಣ ಕನ್ನಡದ ಯುವಕನ ಹೆಸರಿನಲ್ಲಿ ಹ್ಯಾಕರ್​ಗಳು ನಕಲಿ ಬ್ಯಾಕ್​ ತೆರೆದು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಇದರಿಂದ ಚಂದ್ರಶೇಖರ ಎಂಬವರು ರಿಯಾದ್​ನ ಜೈಲಿನಲ್ಲಿದ್ದಾರೆ.

Etv Bharat
Etv Bharat

ಮಂಗಳೂರು (ದಕ್ಷಿಣ ಕನ್ನಡ):2021ರಲ್ಲಿ ಇಲ್ಲಿನ ಬಿಕರ್ನಕಟ್ಟೆ ಮೂಲದ ಶೈಲೇಶ್ ಕುಮಾರ್‌ ಎಂಬವರ ಫೇಸ್​ಬುಕ್​ ಖಾತೆಯನ್ನು ಹ್ಯಾಕ್​ ಮಾಡಿ ಅದರಲ್ಲಿ ಸೌದಿ ರಾಜನ ಬಗ್ಗೆ ಅವಹೇಳನಕಾರಿ ಕಮೆಂಟ್ ಬರೆದ ಪರಿಣಾಮ ಆತ ಸೌದಿ ಜೈಲಿನಲ್ಲಿ ಬಂಧಿಯಾಗಿದ್ದ. ಈಗ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ನಕಲಿ ಬ್ಯಾಂಕ್​ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ಮಾಡಲಾಗಿದೆ. ಇದರಿಂದ ಈಗ ಜಿಲ್ಲೆಯ ಕಡಬದ ಐತೂರು ಗ್ರಾಮದ ಚಂದ್ರಶೇಖರ ಎಂ.ಕೆ. ಎಂಬ ಯುವಕ ರಿಯಾದ್​ನಲ್ಲಿ ಜೈಲು ಪಾಲಾಗಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರಶೇಖರ್ ಅವರ ಸಹೋದರಿ ಪುನೀತ, "ಕಡಬ ಅಲ್ಫಾನರ್ ಸೆರಾಮಿಕ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಚಂದ್ರಶೇಖರ್ ಹ್ಯಾಕರ್​ಗಳ ಸಂಚಿನ ಸುಳಿಗೆ ಬಲಿಯಾಗಿ 2022ರ ನವೆಂಬರ್​ನಿಂದ ರಿಯಾದ್​ನ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಕಳೆದ ವರ್ಷ ಮೊಬೈಲ್ ಹಾಗೂ ಸಿಮ್ ಖರೀದಿಗೆ ರಿಯಾದ್​ನ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಎರಡು ಬಾರಿ ಅವರ ತಂಬ್ ಪಡೆಯಲಾಗಿತ್ತು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲೊಂದು ಸಂದೇಶ ಬಂದಿದೆ. ಅದನ್ನು ಕ್ಲಿಕ್ ಮಾಡಿದ್ದು, ಎರಡು ದಿನಗಳ ಬಳಿಕ ದೂರವಾಣಿ ಕರೆ ಬಂದಿದೆ. ಸಿಮ್ ಮಾಹಿತಿ ಕೇಳಿ ಒಟಿಪಿ ಸಂಖ್ಯೆ ಪಡೆದಿದ್ದಾರೆ. ಆದರೆ, ವಾರದ ಬಳಿಕ ಏನೂ ಮಾಹಿತಿ ನೀಡದೆ ಅವರನ್ನು ರಿಯಾದ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಮಗೆ ರಿಯಾದ್​ನಲ್ಲಿರುವ ಕೊಡಗು ಮೂಲದ ಅರುಣ್ ಎಂಬವರು ವಿಚಾರ ತಿಳಿಸಿದ್ದಾರೆ" ಎಂದರು.

ಆ ಬಳಿಕ ಚಂದ್ರಶೇಖರ್​ಗೆ ತಿಳಿಯದೆ ರಿಯಾದ್​ನಲ್ಲಿ ಬ್ಯಾಂಕ್ ಖಾತೆ ತೆರೆದಿರುವುದು ಗೊತ್ತಾಗಿದೆ. ಖಾತೆಗೆ ರಿಯಾದ್​ನ ಮಹಿಳೆಯೊಬ್ಬರಿಂದ 22 ಸಾವಿರ ರಿಯಲ್ ಹಣ ಜಮೆಯಾಗಿದ್ದು, ಅದು ಇನ್ನಾವುದೋ ದೇಶಕ್ಕೆ ವರ್ಗಾವಣೆಯಾಗಿದೆ. ಆಕೆ ನೀಡಿರುವ ದೂರಿನಂತೆ ಚಂದ್ರಶೇಖರ್‌ ಅವರನ್ನು ಬಂಧಿಸಲಾಗಿದೆ. ಜೈಲುಪಾಲಾದ ಚಂದ್ರಶೇಖರ್​ ಬಿಡುಗಡೆಗೆ ರಿಯಾದ್ ವಕೀಲರ ಮೂಲಕ ಪ್ರಯತ್ನಪಟ್ಟರೂ 10 ಲಕ್ಷ ರೂ. ಖರ್ಚಾಗಿದೆಯೇ ವಿನಃ ಬೇರಾವುದೇ ಫಲಿತಾಂಶ ದೊರಕಿಲ್ಲ ಎಂದು ಅವರು ಹೇಳಿದ್ದಾರೆ.

ನಾವೀಗ ಶೋಭಾ ಕರಂದ್ಲಾಜೆಯವರ ಮೂಲಕ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಸಂಪರ್ಕಿಸಿ ಬಿಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಚಂದ್ರಶೇಖರ್ 22 ಸಾವಿರ ರಿಯಲ್‌ ಹಣವನ್ನು ರಿಯಾದ್​ನ ಮಹಿಳೆಗೆ ನೀಡಬೇಕು ಮತ್ತು ಎರಡು ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕೆಂದು ಅಲ್ಲಿನ ನ್ಯಾಯಾಲಯ ಸೂಚಿಸಿದೆ. ಜನವರಿಯಲ್ಲಿ ಮದುವೆಯಾಗಬೇಕಿದ್ದ ಚಂದ್ರಶೇಖರ್ ಜೈಲಿನಲ್ಲಿದ್ದಾರೆ ಎಂದರು.

ಚಂದ್ರಶೇಖರ್ ರಿಯಾದ್​ಗೆ ಹೋಗಿ ನಾಲ್ಕು ವರ್ಷ ಆಯಿತು. ಮೂರು ಬಾರಿ ಊರಿಗೆ ಬಂದಿದ್ದರು. 2022 ಏಪ್ರಿಲ್​‌ನಲ್ಲಿ ಊರಿಗೆ ಬಂದಿದ್ದರು. ಅವರನ್ನು ಅರೆಸ್ಟ್ ಮಾಡಿದ ಬಳಿಕ ಅವರಿಗೆ ಕೆಲಸ ನೀಡಿದ ಕಂಪನಿ ಯಾವುದೇ ಸ್ಪಂದನೆ ನೀಡುತ್ತಿಲ್ಲ. ನಮ್ಮ ಗಮನಕ್ಕೆ ಬಂದ ಬಳಿಕ ವಿದೇಶಾಂಗ ಸಚಿವಾಲಯದ ಮೂಲಕ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿದೇಶಾಂಗ ಸಚಿವರಿಗೆ ಸಂಸದರ ಪತ್ರ:ಈ ವಿಚಾರದಲ್ಲಿ ವಿದೇಶಾಂಗ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ಪತ್ರ ಬರೆದಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್​, ಚಂದ್ರಶೇಖರ್​​ ಬಿಡುಗಡೆಗೆ ಪ್ರಯತ್ನಿಸುವಂತೆ ಮನವಿ ಮಾಡಿದ್ದಾರೆ.

ಚಂದ್ರಶೇಖರ್​ ಮುಜೂರ್ ಕೆಂಚಪ್ಪ ಎಂಬುವರು ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳಿಂದ ಸೌದಿ ಅರೇಬಿಯಾದ ರಿಯಾದ್​ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಚಂದ್ರಶೇಖರ್ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿಕೊಂಡಿರುವ ಹ್ಯಾಕರ್‌ಗಳು ಅವರ ಹೆಸರಿನಲ್ಲಿ ವಂಚನೆಯ ಬ್ಯಾಂಕ್ ಖಾತೆ ತೆರೆದಿದ್ದಾರೆ. ಮತ್ತು ಸ್ಥಳೀಯ ಮಹಿಳೆಯ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾಯಿಸಿ, ಹಣವನ್ನು ತ್ವರಿತವಾಗಿ ವಿದೇಶಕ್ಕೆ ರವಾನಿಸಲಾಗಿದೆ. ಈ ಸಂಬಂಧ ಚಂದ್ರಶೇಖರ್​​ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಚಂದ್ರಶೇಖರ್​​ ಬಿಡುಗಡೆಗೆ ಪ್ರಯತ್ನಿಸುವಂತೆ ಆಗ್ರಹಿಸಿ ಕಟೀಲ್ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಬೇರೆಯವರಿಂದ ಫೇಸ್​ಬುಕ್ ಖಾತೆ ಹ್ಯಾಕ್ ಮಾಡಿ ಅವಾಂತರ: ಸೌದಿ ಜೈಲಿನಲ್ಲಿ ಬಂಧಿಯಾದ ಮಂಗಳೂರಿನ ವ್ಯಕ್ತಿ

Last Updated : Aug 20, 2023, 9:41 AM IST

ABOUT THE AUTHOR

...view details