ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಕಟ ಮಾಡಿರುವ 43 ಅಭ್ಯರ್ಥಿಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಜೆ ಆರ್ ಲೋಬೋ ಮತ್ತು ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಅವರ ಹೆಸರು ಪ್ರಕಟಿಸಲಾಗಿದೆ. ಇನ್ನೂ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿಲ್ಲ.
ಮಂಗಳೂರು ದಕ್ಷಿಣಕ್ಕೆ ಜೆ ಆರ್ ಲೋಬೋ:ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಕ್ಷೇತ್ರದ ಟಿಕೆಟ್ಗಾಗಿ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಸದಸ್ಯ ಶಶಿಧರ್ ಹೆಗ್ಡೆ, ಕುದ್ರೋಳಿ ದೇವಸ್ಥಾನದ ಖಜಾಂಚಿ ಪದ್ಮರಾಜ್ ಪ್ರಬಲ ಪೈಪೋಟಿ ನೀಡಿದ್ದರು. ಆದರೆ ಹೈಕಮಾಂಡ್ ಜೆ ಆರ್ ಲೋಬೋ ಹೆಸರನ್ನು ಅಂತಿಮಗೊಳಿಸಿದೆ. ಜೆ ಆರ್ ಲೋಬೋ ಅವರು 2013 ರಲ್ಲಿ ಜಯ ಗಳಿಸಿದ್ದರು. 2018 ರಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಎದುರು ಸೋಲು ಕಂಡಿದ್ದರು.
ಪುತ್ತೂರು ಕ್ಷೇತ್ರಕ್ಕೆ ಅಶೋಕ್ ರೈ:ಪುತ್ತೂರು ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಹೊಸಮುಖ ಪರಿಚಯಿಸಿದೆ. ಉದ್ಯಮಿ ಅಶೋಕ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿದೆ. ಅಶೋಕ್ ರೈ ಅವರು ಬಿಜೆಪಿಯ ನಾಯಕರಾಗಿದ್ದರು. ಮಾಜಿ ಸಿ ಎಂ ಸದಾನಂದ ಗೌಡ ಆಪ್ತರೂ ಆಗಿದ್ದ ಅಶೋಕ್ ರೈ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ ಕೂಡ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದರು. ಇದೀಗ ಅಶೋಕ್ ರೈ ಗೆ ಹೈಕಮಾಂಡ್ ಟಿಕೆಟ್ ಅಂತಿಮಗೊಳಿಸಿದೆ.
ಇನ್ನೂ ಪ್ರಕಟವಾಗದ ಮಂಗಳೂರು ಉತ್ತರ ಕ್ಷೇತ್ರ ಟಿಕೆಟ್ :ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಮಂಗಳೂರು ಉತ್ತರ ಕ್ಷೇತ್ರಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ ಮತ್ತು ಉದ್ಯಮಿ ಇನಾಯತ್ ಆಲಿ ನಡುವೆ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ಇದೆ. ಮೊಯ್ದಿನ್ ಬಾವ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಗುರುತಿಸಿಕೊಂಡರೆ, ಇನಾಯತ್ ಆಲಿ ಅವರು ಡಿ ಕೆ ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ದೆಹಲಿ ಮಟ್ಟದಲ್ಲಿ ಇಬ್ಬರೂ ಟಿಕೆಟ್ಗಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಈ ಕ್ಷೇತ್ರದ ಟಿಕೆಟ್ ಯಾರಿಗೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ:ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್: ಲಕ್ಷ್ಮಣ್ ಸವದಿಗೆ ಟಿಕೆಟ್.. ಸಿದ್ದರಾಮಯ್ಯಗೆ ಕೋಲಾರ ಮಿಸ್