ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ 2017 ರಿಂದ ಸೇವೆ ಸಲ್ಲಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2009ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಆ ಬಳಿಕ ಶಿವಮೊಗ್ಗದಲ್ಲಿ ಸಿಇಒ, ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
2017ರಲ್ಲಿ ಮಂಗಳೂರಿಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಅವರು ಜಿಲ್ಲೆಯಲ್ಲಿನ ಅನೇಕ ಸಮಸ್ಯೆಗಳನ್ನು ಯಶಸ್ವಿಯಾಗಿ ಬಗೆಹರಿಸಿದ್ದಾರೆ. ಈ ವರ್ಷದಿಂದ ಜಿಲ್ಲೆಯನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದರು. ಮುಖ್ಯವಾಗಿ ಸೊಳ್ಳೆಗಳ ಲಾರ್ವಾ ನಾಶಕ್ಕೆ ವಿಶೇಷ ಒತ್ತು ನೀಡುವ ಸಲುವಾಗಿ ತಮ್ಮ ಮನೆಯಿಂದಲೇ 'ಡ್ರೈವ್ ಡೇ' ಆಚರಿಸಿದ್ದರು. ಈ ಮೂಲಕ ಇಡೀ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಮಾಣವನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಹಾಗೂ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸಿದ್ದರು.
ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿ, ಅನಾವೃಷ್ಟಿ ಎರಡೂ ಕಾಡಿದ್ದು, ಈ ಎರಡೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಅವರು ಸಮರ್ಥವಾಗಿ ನಿಭಾಯಿಸಿದ್ದರು. ಈ ಬಾರಿ ದ.ಕ. ಜಿಲ್ಲೆಯಲ್ಲಿ ಜುಲೈ 15 ರವರೆಗೆ ಮಳೆ ಅಗೋಚರವಾಗಿದ್ದು, ಆಗ ಸೆಂಥಿಲ್ ಅವರು ಈ ಬರ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದರು. ಈ ಸಂದರ್ಭ ತುಂಬೆಯ ನೀರನ್ನು ರೇಶನಿಂಗ್ ಮೂಲಕ ಐದು ದಿನಕ್ಕೊಂದು ಬಾರಿ ಸರಬರಾಜು ಮಾಡಿ, ಯಾವುದೇ ರೀತಿ ಕೊರತೆ ಆಗದಂತೆ ನೋಡಿಕೊಂಡಿದ್ದರು.
ಅದೇ ರೀತಿ ಅತಿವೃಷ್ಟಿಯಿಂದ ಇಡೀ ಜಿಲ್ಲೆ ಪ್ರವಾಹದಿಂದ ತತ್ತರಿಸಿದ್ದು, ಈ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ಚೆಕ್ಗಳನ್ನು ನೀಡಿ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅಲ್ಲದೆ ಜಿಲ್ಲೆಯ ಬಹುಮುಖ್ಯ ಸಮಸ್ಯೆ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಿದ್ದಾರೆ. ನೇತ್ರಾವತಿ ನದಿಯಲ್ಲಿ ಹೂಳೆತ್ತುವ ಮೂಲಕ ಮೇಲೆತ್ತಿದ ಮರಳನ್ನು ಆ್ಯಪ್ ಮೂಲಕ ವಿತರಿಸಿ ಮರಳು ಮಾಫಿಯಾವನ್ನು ಸಂಪೂರ್ಣವಾಗಿ ತಡೆದಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.