ಮಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆಯೇ ಈ ಪ್ರಕರಣವೂ ಒಂದುರೀತಿ ಹಾಗೇ ಇದೆ. ಗಂಡ-ಹೆಂಡತಿ ಮಗುವಿನ ವಿಷಯದಲ್ಲಿ ಕಿತ್ತಾಡಿಕೊಂಡಿದ್ದಾರೆ. ಬಳಿಕ ತಮ್ಮ ಮಗುವನ್ನು ಬಚ್ಚಿಟ್ಟ ತಂದೆ ಶಾಲೆಯಲ್ಲಿ ಹೈಡ್ರಾಮ ನಡೆಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ತಮ್ಮ ಮಗನನ್ನೇ ಬಚ್ಚಿಟ್ಟ ತಂದೆ.. 4ನೇ ತರಗತಿಯಲ್ಲಿ ಕಲಿಯುತ್ತಿರುವ 9 ವರ್ಷದ ಬಾಲಕ ಹೆಜಮಾಡಿಯಿಂದ ಪ್ರತಿನಿತ್ಯ ಕಾರ್ನಾಡು - ಖಾಸಗಿ ಶಾಲೆಗೆ ಬಸ್‌ನಲ್ಲಿ ಹೋಗುತ್ತಿದ್ದನು. ಎಂದಿನಂತೆ ಶುಕ್ರವಾರವೂ ಶಾಲೆಗೆ ತೆರಳಿದ್ದಾನೆ. ರಿಕ್ಷಾ ಚಾಲಕನಾಗಿರುವ ಬಾಲಕನ ತಂದೆ ಹರೀಶ್ ಎಂಬುವರು ಶಾಲೆಗೆ ಹೋಗಿ ತಮ್ಮ ಮಗ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ಶಾಲೆಯಲ್ಲಿ ಹುಡುಕಾಡಿದಾಗ ಬಾಲಕ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂದಿದೆ.
ಮಗನನ್ನು ಬಚ್ಚಿಟ್ಟ ತಂದೆಯಿಂದ ಶಾಲೆಯಲ್ಲಿ ಹೈಡ್ರಾಮ ಅಪಹರಣದ ವದಂತಿ.. ಶಾಲೆಯಲ್ಲಿ ಬಾಲಕನ ತಂದೆ ಹರೀಶ್ ರಂಪಾಟ ನಡೆಸಿ ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಬಾಲಕ ನಾಪತ್ತೆಯಾಗಿರುವುದರಿಂದ ಶಾಲೆಯಲ್ಲಿ ಅಪರಣದ ಬಗ್ಗೆ ವದಂತಿ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ಮೂಲ್ಕಿ ಪೊಲೀಸರು ಆಗಮಿಸಿ ಶಾಲೆಯ ಕಟಡದಲ್ಲಿರುವ ಅಂಗಡಿಯೊಂದರ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲನೆ ನಡೆಸಿದ್ದರು.
ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಚ್ಚರಿವೊಂದು ಕಾದಿತ್ತು. ಶಾಲೆಯ ಕಡೆಗೆ ಬಾಲಕ ಬಂದಿದ್ದು ಕಂಡುಬಂದಿದೆ. ಈ ಸಂದರ್ಭ ಅಲ್ಲಿಗೆ ಆಟೋ ಚಲಾಯಿಸುತ್ತ ಬಂದ ಬಾಲಕನ ತಂದೆ ಹರೀಶ್ ಮಗುವನ್ನು ಆಟೋದಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಕ್ರಮಕ್ಕೆ ಮುಂದಾದ ಪೊಲೀಸರು ಮಗುವಿನ ತಂದೆ ಹರೀಶ್ ಅವರನ್ನು ವಿಚಾರಿಸಿದಾಗ ಗಂಡ-ಹೆಂಡತಿ ಜಗಳ ಬಯಲಿಗೆ ಬಂದಿದೆ. ಬಾಲಕನಿಗೆ ಅನಾರೋಗ್ಯ ಉಂಟಾಗಿದ್ದು, ಕೆರೆಕಾಡುವಿನ ತನ್ನ ಮಿತ್ರನ ಮನೆಯಲ್ಲಿ ಇರಿಸಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮಗನಿಗೆ ಹುಷಾರಿಲ್ಲ. ಮಗ ಶಾಲೆಗೆ ಹೋಗುವ ವಿಚಾರದಲ್ಲಿ ನನಗೂ ಮತ್ತು ನನ್ನ ಪತ್ನಿಗೂ ಭಿನ್ನಾಭಿಪ್ರಾಯ ಇತ್ತು. ಮಗನನ್ನು ಶಾಲೆಗೆ ಕಳುಹಿಸಲು ಇಷ್ಟವಿಲ್ಲದ ಕಾರಣ ಅವನನ್ನು ಕೆರೆಕಾಡುವಿನ ತಮ್ಮ ಮಿತ್ರನ ಮನೆಯಲ್ಲಿ ಇರಿಸಿದ್ದೇನೆ ಎಂದು ಹೇಳಿದ್ದಾರೆ. ಮಗುವಿನ ಕಾಳಜಿ ಹಿನ್ನೆಲೆ ತಂದೆ ಈ ರೀತಿ ಮಾಡಿದ್ದಾರೆ ಎಂದು ಅರಿತ ಪೊಲೀಸರು ಹರೀಶ್ಗೆ ಮುಂದೆ ಈ ರೀತಿ ಮಾಡಬಾರದೆಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಮಕ್ಕಳ ಕಳ್ಳರ ಅಪಪ್ರಚಾರದ ನಡುವೆ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಓದಿ:ಶೌಚಾಲಯದಲ್ಲಿ ಮಗು ಕೂಡಿ ಹಾಕಿದ ಪ್ರಕರಣ: ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ವಜಾಕ್ಕೆ ಶಿಫಾರಸು