ಸುಳ್ಯ(ದಕ್ಷಿಣ ಕನ್ನಡ): ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಆದರೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಅಡಿಕೆ ಬೆಳೆಗಾರರಿದ್ದು, ಅವುಗಳಲ್ಲಿ ಕಾರ್ಮಿಕರ ಸಮಸ್ಯೆಯೂ ಒಂದು. ಅಡಿಕೆಗೆ ಮದ್ದು ಬಿಡುವ, ಅಡಿಕೆ ಕೊಯ್ಯುವ ನುರಿತ ಕಾರ್ಮಿಕರ ಸಮಸ್ಯೆಯ ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ವಕದ ಯುವ ಕೃಷಿಕನೋರ್ವ ಉಪಕರಣವೊಂದನ್ನು ಆವಿಷ್ಕರಿಸಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚಾರ್ವಾಕದ ಯುವ ಕೃಷಿಕ ಭಾಸ್ಕರ್ ಎಂಬವರು ತಾನೇ ಸ್ವಾವಲಂಭಿಯಾಗಿ ತೋಟದ ಕೆಲಸದಲ್ಲಿ ತೊಡಗುವಂತಹ ಉಪಕರಣವೊಂದನ್ನು ಆವಿಷ್ಕರಿಸಿದ್ದಾರೆ. ಅಡಿಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಈ ಯಂತ್ರದಿಂದ ಅಡಿಕೆಗೆ ಮದ್ದು ಬಿಡುವ, ಅಡಿಕೆ ಕೊಯ್ಯವ ಕೆಲಸವನ್ನು ಮಾಡಬಹುದಾಗಿದೆ. ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರೂ ಈ ಉಪಕರಣವನ್ನು ಬಳಸಿ ಅಡಿಕೆ ಮರವನ್ನು ಹತ್ತಬಹುದಾಗಿದೆ. ಕಬ್ಬಿಣದ ರಾಡ್ಗಳನ್ನು ಬಳಸಿ ಈ ಉಪಕರಣವನ್ನು ತಯಾರಿಸಲಾಗಿದೆ. ಅಡಿಕೆ ಮರವನ್ನು ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಸಹಾಯದಿಂದ ಈ ಉಪಕರಣವನ್ನು ಉಪಯೋಗಿಸಬಹುದಾಗಿದೆ.
ಅಡಿಕೆ ಮರ ಹತ್ತುವ ಟ್ರೀ ಸೈಕಲ್: 5ನೇ ತರಗತಿಯವರೆಗೆ ಓದಿರುವ ಭಾಸ್ಕರ್, ಬಳಿಕ ಹಲವಾರು ಕಾರಣಗಳಿಂದಾಗಿ ಓದನ್ನು ಅರ್ಧಕ್ಕೇ ಬಿಟ್ಟು ಕೃಷಿಯತ್ತ ಮುಖ ಮಾಡಿದವರು. ಅಡಿಕೆ ತೋಟವನ್ನು ಹೊಂದಿರುವ ಭಾಸ್ಕರ್ ಅವರಿಗೆ ಕಾರ್ಮಿಕರ ಸಮಸ್ಯೆಯ ಬಗ್ಗೆ ಅರಿವಿತ್ತು. ಸಾಮಾನ್ಯವಾಗಿ ಕಾರ್ಮಿಕರು ದೊಡ್ಡ ತೋಟಗಳಲ್ಲಿ ಹೆಚ್ಚು ಆದಾಯ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸಣ್ಣ ಕೃಷಿ ತೋಟಗಳತ್ತ ಬಾರದೇ ಇರುವುದರಿಂದಾಗಿ ಸಣ್ಣ ಕೃಷಿಕನ ತೋಟಕ್ಕೆ ಸರಿಯಾದ ಸಮಯದಲ್ಲಿ ಮದ್ದು ಬಿಡದೆ ಅಡಿಕೆ ಬೆಳೆ ನಾಶವಾದ ಉದಾಹರಣೆಗಳೂ ಇವೆ. ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲ್ ಅನ್ನು ಸಿದ್ಧಪಡಿಸಿದ್ದಾರೆ.