ಮಂಗಳೂರು:ಇತ್ತೀಚೆಗೆ ಯುವ ಸಮುದಾಯಗಳ ಆಕಾಂಕ್ಷೆ, ಬಯಕೆಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಕರಾವಳಿಯಲ್ಲಿ ಯುವ ಜನತೆಯ ಬಯಕೆಗಳನ್ನು ಪೂರೈಸಲು ಪ್ರವಾಸೋದ್ಯಮ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಸ್ವಚ್ಛತಾ ಪಕ್ವಾಡ-2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮನಪಾ ವತಿಯಿಂದ ನಗರದ ತಣ್ಣೀರುಬಾವಿ ಕಡಲ ತೀರದಲ್ಲಿ ಹಮ್ಮಿಕೊಂಡ 'ಸ್ವಚ್ಛತಾ ಪಕ್ವಾಡ-2020' ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಪ್ರಜಾಪ್ರಭುತ್ವದ ಲಾಭಾಂಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳದಿದ್ದಲ್ಲಿ, ಯುವ ಸಮುದಾಯ ದಿಕ್ಕು ಬದಲಾಯಿಸಿ ಸಾಮಾಜಿಕ ಅಂಶಗಳು ನಕಾರಾತ್ಮಕ ಅಂಶಗಳಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರವಾಸೋದ್ಯಮ ಅಭಿವೃದ್ಧಿಯು ಜಿಡಿಪಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಬೇರೆ ಬೇರೆ ಕಡೆಗಳಲ್ಲಿರುವ ಜನರು ನಮ್ಮಲ್ಲಿಗೆ ಪ್ರವಾಸ ಕೈಗೊಳ್ಳುವುದರಿಂದ ವಿವಿಧ ರೀತಿಯಲ್ಲಿ ಸ್ಥಳೀಯರ ಆದಾಯಗಳು ಹೆಚ್ಚಾಗುತ್ತದೆ. ಆದರೆ ಕೋವಿಡ್ ಭೀತಿಯಿಂದ ಪ್ರವಾಸೋದ್ಯಮದ ಮೇಲೆ ಮಾರಕ ಪರಿಣಾಮ ಬೀರಿದ್ದು, ಕೃಷಿ ಹಾಗೂ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಪ್ರವಾಸೋದ್ಯಮದ ಮೂಲಕ ಕೃಷಿಯಿಂದ ಆರ್ಥಿಕತೆಗೆ ಪುಷ್ಟಿ ಬರುತ್ತದೆ ಎಂದರೆ ತಪ್ಪಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ತಣ್ಣೀರುಬಾವಿ ಕಡಲ ತೀರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಪಕ್ವಾಡ-2020 ದ.ಕ.ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ 17 ಕೋ.ರೂ.ಗಳ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 9 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ಒಂದು ತಿಂಗಳು ದ.ಕ.ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡುವ ಉದ್ದೇಶ ಹೊಂದಿರುವುದಾಗಿ ಡಿಸಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ದಾರಿಸೂಚಕ ಫಲಕವನ್ನು ಉದ್ಘಾಟಿಸಲಾಯಿತು. ಅಲ್ಲದೆ ವಿವಿಧ ಪ್ರಾತ್ಯಕ್ಷಿಕೆಗಳ ಸಂದರ್ಭ ಸರ್ಫ್ ರೆಸ್ಕ್ಯೂ ಮುಂತಾದವುಗಳನ್ನು ಪ್ರದರ್ಶಿಸಲಾಯಿತು.