ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗೂ ಸಹ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿರುವ ಅವರು, ತನಗೆ ಕೋವಿಡ್-19 ಸೋಂಕು ದೃಢಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಎಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ ಎಂದು ಬರೆದಿದ್ದಾರೆ.
ಜ್ವರ ಹಾಗೂ ಕೆಮ್ಮು ಹೀಗೆ ಸೋಂಕಿನ ಲಕ್ಷಣ ಕಂಡು ಬಂದಿರುವ ಹಿನ್ನೆಲೆ ಸ್ವಯಂಪ್ರೇರಿತರಾಗಿ ಅವರೇ ಖಾಸಗಿ ಆಸ್ಪತ್ರೆಗೆ ತೆರಳಿ ಗಂಟಲು ದ್ರವದ ಮಾದರಿಯ ತಪಾಸಣೆ ಮಾಡಿಸಿದ್ದಾರೆ. ಇಂದು ಅದರ ವರದಿ ಬಂದಿದ್ದು, ಸೋಂಕು ದೃಢಗೊಂಡಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದ.ಕ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಆಗಿದ್ದ ಇವರು, ಎರಡು ದಿನದ ಹಿಂದೆಯಷ್ಟೇ ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.