ಮಂಗಳೂರು: ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಮನೆಗೆ ತೆರಳಿ ಸೊಳ್ಳೆ ಉತ್ಪತ್ತಿ ತಾಣವನ್ನು ಗುರುತಿಸಿ ಸಮೀಕ್ಷೆ ನಡೆಸಬೇಕು. ಅಲ್ಲದೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಸೊಳ್ಳೆ ದಿನ ಕಾರ್ಯಕ್ರಮ ಹಾಗೂ ಮಲೇರಿಯಾ, ಡೆಂಗ್ಯೂ ನಿಯಂತ್ರಣದಲ್ಲಿ ವಿವಿಧ ಇಲಾಖೆಯ ಪಾತ್ರದ ಕುರಿತು ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಕಳೆದ ಹಲವು ತಿಂಗಳುಗಳಿಂದ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು ಸೇರಿದಂತೆ ಇನ್ನಿತರ ಕಟ್ಟಡಗಳು ಮುಚ್ಚಿದ್ದು, ಆ ಕಟ್ಟಡಗಳ ಮೇಲ್ಭಾಗದಲ್ಲಿ ನೀರು ಶೇಖರಣೆಗೊಂಡು ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಆದುದರಿಂದ ಅಂತಹ ಎಲ್ಲಾ ಪ್ರದೇಶಗಳನ್ನು ಗುರುತಿಸಿ ಜಿಲ್ಲಾ ಆರೋಗ್ಯ ಇಲಾಖೆ, ಆರೋಗ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ನೆರವು ಪಡೆದುಕೊಂಡು ಲಾರ್ವಾ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.