ಮಂಗಳೂರು: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಎರಡನೇ ದೈನಂದಿನ ವಿಮಾನ ಯಾನವನ್ನು ಆರಂಭಿಸಿದೆ. ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ಜೂನ್ 10ರಿಂದ ಏರ್ ಇಂಡಿಯಾ ತನ್ನ ಎರಡನೇ ದೈನಂದಿನ ವಿಮಾನಯಾನ ಸೇವೆಯನ್ನು ಆರಂಭಿಸಿದೆ.
ಮೇ 22 ರಂದು ಇಂಡಿಗೊ ಮುಂಬೈ-ಮಂಗಳೂರು ವಲಯದಲ್ಲಿ ಮೂರನೇ ದೈನಂದಿನ ವಿಮಾನವನ್ನು ಪ್ರಾರಂಭಿಸಿದ ನಂತರ ಈ ವಿಮಾನ ಸಂಚಾರ ಆರಂಭವಾಗಿದೆ. ಇದರೊಂದಿಗೆ, ಎರಡು ವಿಮಾನಯಾನ ಸಂಸ್ಥೆಗಳು ಈ ಹೆಚ್ಚು ಜನ ಪ್ರಯಾಣಿಸುವ ವಲಯದಲ್ಲಿ ಐದು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತವೆ.
4.9 ಲಕ್ಷ ಪ್ರಯಾಣಿಕರು ಪ್ರಯಾಣಿಕರ ಪ್ರಯಾಣ: 2022 ರಲ್ಲಿ, ಮುಂಬೈ- ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ ಮಾರ್ಗವಾಗಿ ಹೊರಹೊಮ್ಮಿತು. 4.9 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು.
ಏರ್ ಇಂಡಿಯಾ ವಿಮಾನ ಹಾರಾಟ ಸಮಯ:ಏರ್ ಇಂಡಿಯಾ ವಿಮಾನ 1679 ಮುಂಬೈನಿಂದ ಮಧ್ಯಾಹ್ನ 12.40ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಮಂಗಳೂರು ತಲುಪಲಿದೆ. ಎಐ 1680 ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.35ಕ್ಕೆ ಮುಂಬೈ ತಲುಪಲಿದೆ. ಮತ್ತೊಂದು ಏರ್ ಇಂಡಿಯಾ ವಿಮಾನ ಎಐ 679 ಮುಂಬೈನಿಂದ ಬೆಳಿಗ್ಗೆ 5.45 ಕ್ಕೆ ಹೊರಟು ಬೆಳಗ್ಗೆ 7.20 ಕ್ಕೆ ಮಂಗಳೂರು ತಲುಪಲಿದೆ. ಎಐ 680 ವಿಮಾನವು ಮಂಗಳೂರಿನಿಂದ ಬೆಳಿಗ್ಗೆ 7.55 ಕ್ಕೆ ಹೊರಟು ಮುಂಬೈಗೆ ಬೆಳಗ್ಗೆ 9.35 ಕ್ಕೆ ತಲುಪುತ್ತದೆ.
ವಿಮಾನಯಾನ ಉದ್ಯಮದ ಮೂಲಗಳ ಪ್ರಕಾರ, ಇಂಡಿಗೊ ಪ್ರಸ್ತುತ ಬೇಸಿಗೆ ವಿಮಾನಯಾನ ವೇಳಾಪಟ್ಟಿಯ ಅಂತ್ಯದವರೆಗೆ ಮುಂಬೈಗೆ ತನ್ನ ಮೂರನೇ ದೈನಂದಿನ ವಿಮಾನವನ್ನು ನಿರ್ವಹಿಸಲಿದೆ. ಆರಂಭದಲ್ಲಿ ಜೂನ್ 15 ರವರೆಗೆ ಈ ಮೂರನೇ ದೈನಂದಿನ ಹಾರಾಟವನ್ನು ಯೋಜಿಸಿ ನಂತರ ಅದನ್ನು ಜುಲೈ 31ರ ವರೆಗೆ ವಿಸ್ತರಿಸಿದೆ. ಇದರೊಂದಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೈನಂದಿನ ವಿಮಾನ ಸಂಚಾರ ಚಲನೆ 38 ಆಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 5000 ಆಸುಪಾಸಿನಲ್ಲಿದೆ ಎಂದು ಮೂಲಗಳಿಂದ ಬಂದ ಮಾಹಿತಿಯಾಗಿದೆ.
ಇದನ್ನೂ ಓದಿ:Hubli airport: ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ ₹ 273 ಕೋಟಿ ಬಿಡುಗಡೆ, ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯ ಆರಂಭ: ಪ್ರಹ್ಲಾದ್ ಜೋಶಿ