ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ತಕ್ಷಣ ಬೋಟ್ನಲ್ಲಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿರುವ ಘಟನೆ ನಡೆದಿದೆ.
ದೋಣಿಯಲ್ಲಿ ಸಿಲಿಂಡರ್ ಸ್ಫೋಟ: ಕರಾವಳಿ ರಕ್ಷಣಾ ಪಡೆಯಿಂದ 11 ಮೀನುಗಾರರ ರಕ್ಷಣೆ - Cylinder explosion in a fishing boat
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮೀನುಗಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಘಟನೆಯಲ್ಲಿ ಗಾಯಗೊಂಡಿರುವ ಓರ್ವ ಮೀನುಗಾರ ಹಾಗೂ ಇತರ ಮೀನುಗಾರರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಮೂಲದ ಈ ಮೀನುಗಾರಿಕಾ ದೋಣಿಯು ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿತ್ತು. ಈ ಸಂದರ್ಭ ಬೋಟ್ನಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ಭಾರತೀಯ ಕರಾವಳಿ ರಕ್ಷಣಾ ಪಡೆ ಕಾರ್ಯೋನ್ಮುಖವಾಗಿದ್ದು, ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು. ಅಲ್ಲದೆ ಅಪಾಯಕ್ಕೆ ಈಡಾಗಿದ್ದ ದೋಣಿಯ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು. ಈ ಪಡೆಯು ದೋಣಿ ಪತ್ತೆ ಮಾಡಿದ್ದಲ್ಲದೆ ಮೀನುಗಾರರ ನೌಕೆಯೊಂದಿಗೆ ಸಂವಹನ ಸಾಧಿಸಿ ರಕ್ಷಿಸುವಲ್ಲಿ ಸಫಲವಾಯಿತು.