ಕರ್ನಾಟಕ

karnataka

ETV Bharat / state

ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್​ಗೆ 20ನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ - Cyanide Mohan

ಸೈನೈಡ್​ ಮೋಹನ್​ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿತು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ.

ಸೈನೈಡ್ ಮೋಹನ್​ಗೆ 20ನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ
ಸೈನೈಡ್ ಮೋಹನ್​ಗೆ 20ನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ

By

Published : Jun 24, 2020, 9:36 PM IST

ಮಂಗಳೂರು: ಮದುವೆ ಆಗುವ ಭರವಸೆ ನೀಡಿ ಅತ್ಯಾಚಾರ ಎಸಗಿ ಸೈನೈಡ್ ನೀಡಿ ಹತ್ಯೆ ಮಾಡಿರುವ 20ನೇ ಹಾಗೂ ಕೊನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್‌ ಮೇಲಿನ ಆರೋಪ ಸಾಬೀತಾಗಿದ್ದು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಶಿಕ್ಷೆಯ ವಿವರ:

ಕೊಲೆ ಅಪರಾಧಕ್ಕಾಗಿ (ಐಪಿಸಿ ಸೆಕ್ಷನ್ 302) ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ, ಅಪಹರಣ ಅಪರಾಧಕ್ಕೆ (ಐಪಿಸಿ ಸೆಕ್ಷನ್ 366) 10 ವರ್ಷ ಶಿಕ್ಷೆ ಮತ್ತು 5,000 ರೂ. ದಂಡ, ಅತ್ಯಾಚಾರ (ಐಪಿಸಿ ಸೆಕ್ಷನ್ 376) ಅಪರಾಧಕ್ಕೆ 7 ವರ್ಷ ಸಜೆ ಮತ್ತು 5000 ರೂ. ದಂಡ, ವಿಷ ಪದಾರ್ಥ (ಸೈನೈಡ್) ಉಣಿಸಿದ (ಐಪಿಸಿ ಸೆಕ್ಷನ್​ 328) ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 5000 ರೂ. ದಂಡ, ಚಿನ್ನಾಭರಣ ಸುಲಿಗೆ (ಐಪಿಸಿ ಸೆಕ್ಷನ್ 392) ಅಪರಾಧಕ್ಕೆ 5 ವರ್ಷ ಕಠಿಣ ಸಜೆ ಮತ್ತು 5000 ರೂ. ದಂಡ, ವಿಷ ಉಣಿಸಿ ಸುಲಿಗೆ ಮಾಡಿದ (ಐಪಿಸಿ ಸೆಕ್ಷನ್​ 394) ಅಪರಾಧಕ್ಕೆ 10 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ (ಐಪಿಸಿ ಸೆಕ್ಷನ್ 417) ಅಪರಾಧಕ್ಕೆ 1 ವರ್ಷ ಶಿಕ್ಷೆ, ಸಾಕ್ಷ್ಯ ನಾಶ (ಐಪಿಸಿ ಸಡಕ್ಷನ್ 201) ಅಪರಾಧಕ್ಕೆ 7 ವರ್ಷ ಸಜೆ ಮತ್ತು 5,000 ರೂ. ದಂಡ ಶಿಕ್ಷೆಯನ್ನು ವಿಧಿಸಲಾಗಿದೆ.

ಪ್ರಕರಣ ವಿವರ:

2009ರಲ್ಲಿ ಸೈನೈಡ್ ಮೋಹನ್​ಗೆ ಲೇಡಿಸ್ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಾಸರಗೋಡಿನ 25 ವರ್ಷದ ಯುವತಿಯ ಪರಿಚಯ ಆಗುತ್ತದೆ. ಬಳಿಕ ಆತ ಆಕೆಯನ್ನು ಮದುವೆ ಆಗುವುದಾಗಿ ಭರವಸೆ ನೀಡಿ ಮೂರು ಬಾರಿ ಆಕೆಯ ಮನೆಗೆ ಹೋಗಿ ನಂಬಿಸಿದ್ದನು. 2009ರ ಜುಲೈ 8ರಂದು ಯುವತಿ ಸುಳ್ಯದ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಸುಳ್ಯದಿಂದ ಮೋಹನ್ ಆಕೆಯನ್ನು ಬೆಂಗಳೂರಿಗೆ ಕರೆದೊಯ್ಯುತ್ತಾನೆ. ಮೂರು ದಿನಗಳ ಬಳಿಕ ಮನೆ ಮಂದಿ ಆಕೆಗೆ ಫೋನ್ ಮಾಡಿದಾಗ ಮೋಹನ್ ಕರೆಯನ್ನು ಸ್ವೀಕರಿಸಿ, ‘ಆಕೆ ಸ್ನಾನಕ್ಕೆ ಹೋಗಿದ್ದಾಳೆ. ನಾವು ಮದುವೆ ಆಗಿದ್ದು, ಶೀಘ್ರದಲ್ಲಿಯೇ ಮನೆಗೆ ವಾಪಾಸಾಗುತ್ತೇವೆ’ ಎಂದು ತಿಳಿಸಿದ್ದನು. ಆದರೆ ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಮೋಹನ್ ಜು.15ರಂದು ಬೆಳಗ್ಗೆ ಯುವತಿಯನ್ನು ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಸೈನೈಡ್ ಮಾತ್ರೆ ನೀಡಿದ್ದನು. ಅದನ್ನು ಸೇವಿಸಿದ ಆಕೆ ಶೌಚಾಲಯದ ಬಾಗಿಲಿನ ಬಳಿ ಕುಸಿದು ಬಿದ್ದಿದ್ದು, ಅಷ್ಟರಲ್ಲಿ ಮೋಹನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕುಸಿದು ಬಿದ್ದಿದ್ದ ಯುವತಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ರಾಮಕೃಷ್ಣ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಳು.

2009ರ ಅಕ್ಟೋಬರ್‌ನಲ್ಲಿ ಮೋಹನ್ ಬಂಧಿತನಾದ ಸಂದರ್ಭ ಯುವತಿಯ ಸಹೋದರಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಯುವತಿಯ ಮೃತದೇಹದ ಪರೀಕ್ಷೆಯಲ್ಲಿ ಸೈನೈಡ್ ಅಂಶವಿರುವುದು ದೃಢ ಪಟ್ಟಿತ್ತು. ಈ ಪ್ರಕರಣದಲ್ಲಿ ಮೃತ ಯುವತಿಯ ‘ವಿಸ್ರಾ’ ಪರೀಕ್ಷೆಯಲ್ಲಿ ಸೈನೈಡ್ ಅಂಶ ಇರುವುದು ದೃಢಪಟ್ಟಿದೆ. 46 ಸಾಕ್ಷಿಗಳ ವಿಚಾರಣೆ, 89 ದಾಖಲಾತಿಗಳನ್ನು ಹಾಗೂ 31 ಸೊತ್ತುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಅಲ್ಲದೆ ಯುವತಿಯಿಂದ ಸುಲಿಗೆ ಮಾಡಿದ್ದ ಚಿನ್ನಾಭರಣಗಳ ಪೈಕಿ ಒಂದು ಪೆಂಡೆಂಟ್ ಮೋಹನ್​ನ 2ನೇ ಪತ್ನಿಯ ಮನೆಯಿಂದ ವಶಕ್ಕೆ ಪಡೆದಿದ್ದು, ಅದನ್ನು ಕುಂಟಾರಿನ ಯುವತಿಯ ತಾಯಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಸೈನೈಡ್​ ಮೋಹನ್​ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿತು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ. ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್​ನ ಮೇಲಿದ್ದ 20 ಪ್ರಕರಣಗಳಲ್ಲಿ ಆತನಿಗೆ 5ರಲ್ಲಿ ಮರಣ ದಂಡನೆ, 10ರಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು, 5 ಪ್ರಕರಣ ಖುಲಾಸೆ‌ಯಾಗಿತ್ತು. ಈ ಪೈಕಿ 1 ಪ್ರಕರಣದಲ್ಲಿ ಹೈಕೋರ್ಟ್ ಮರಣದಂಡನೆಯನ್ನು ದೃಢೀಕರಿಸಿದೆ. 1 ಪ್ರಕರಣವನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. ಇನ್ನೊಂದು ಪ್ರಕರಣವನ್ನು ರದ್ದು ಪಡಿಸಿದೆ. ಇನ್ನೆರಡು ಪ್ರಕರಣಗಳು ಹೈಕೋರ್ಟ್‌ನ ತೀರ್ಮಾನಕ್ಕೆ ಬಾಕಿ ಇವೆ. 10 ಪ್ರಕರಣಗಳಲ್ಲಿ ಜೀವಾವಧಿ ಸಜೆಯಾಗಿದೆ. 5 ಪ್ರಕರಣಗಳು ಖುಲಾಸೆಗೊಂಡಿವೆ.

ABOUT THE AUTHOR

...view details