ಕರ್ನಾಟಕ

karnataka

ETV Bharat / state

ಅಕ್ರಮ ಚಿನ್ನ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ವಶಕ್ಕೆ

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಚಿನ್ನ ಸಾಗಾಟ ಪ್ರಕರಣ
ಅಕ್ರಮ ಚಿನ್ನ ಸಾಗಾಟ ಪ್ರಕರಣ

By ETV Bharat Karnataka Team

Published : Oct 19, 2023, 11:00 PM IST

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವ ಪುರುಷ ಮತ್ತು ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 17 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ವಿಮಾನದಲ್ಲಿದ್ದ ಒಬ್ಬ ಮಹಿಳಾ ಮತ್ತು ಪುರುಷ ಪ್ರಯಾಣಿಕನನ್ನು ತಡೆದು ಪರಿಶೀಲಿಸಲಾಯಿತು.

ಮಾಸ್ಕ್ ಧರಿಸಿದ್ದ ಪುರುಷ ಪ್ರಯಾಣಿಕನ ಕೆನ್ನೆಯ ಭಾಗವು ಅಸಹಜವಾಗಿ ಕಂಡುಬಂದಿತ್ತು. ಆತನನ್ನು ಮತ್ತಷ್ಟು ತಪಾಸಣೆ ನಡೆಸಿದಾಗ ಅವನ ಬಾಯಿಯೊಳಗೆ ಎರಡು ಚಿನ್ನದ ತುಂಡುಗಳನ್ನು ಅಡಗಿಸಿಡಲಾಗಿತ್ತು. ಮಹಿಳಾ ಪ್ರಯಾಣಿಕೆಯನ್ನು ಪರಿಶೀಲಿಸಿದಾಗ ಆಕೆಯ ಕೂದಲಿನ ರಬ್ಬರ್ ಬ್ಯಾಂಡ್‌ನಲ್ಲಿ ಚಿನ್ನವನ್ನು ಮರೆಮಾಡಲಾಗಿತ್ತು. ಎರಡು ಪ್ರಕರಣಗಳಲ್ಲಿ, ಒಟ್ಟು 191 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ದತೆಯ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ. 11,44,090/- ರೂ ಎಂದು ಅಂದಾಜಿಸಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.

1,254 ಗ್ರಾಂ ಚಿನ್ನ ವಶ: ಕೆಲ ದಿನಗಳ ಹಿಂದೆ ಎರಡು ಪತ್ಯೇಕ ಪ್ರಕರಣಗಳ ಅಡಿ ಅಕ್ರಮವಾಗಿ ಸಾಗಿಸುತ್ತಿದ್ದ 1,254 ಗ್ರಾಂ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮೊದಲ ಪ್ರಕರಣದಲ್ಲಿ ಅಕ್ಟೋಬರ್ 9ರಂದು ಎರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 816 ಮೂಲಕ ಅಬುಧಾಬಿಯಿಂದ ಮಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದ್ದರು.

ಈ ವೇಳೆ ಆರೋಪಿಯ ಬಳಿ 1,053 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿತ್ತು. ಇದರ ಮೌಲ್ಯ 61.6 ಲಕ್ಷ ರೂಪಾಯಿ ಆಗಿತ್ತು. ಎರಡನೇ ಪ್ರಕರಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX384 ಮೂಲಕ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನ ಬ್ಯಾಗ್‌ನಲ್ಲಿ ಹೊದಿಕೆಯೊಳಗೆ ಇಟ್ಟುಕೊಂಡಿದ್ದ ಡಬಲ್ ಲೇಯರ್ಡ್ ಬಟ್ಟೆಯಲ್ಲಿ ಬಚ್ಚಿಡಲಾಗಿದ್ದ 201 ಗ್ರಾಂ ಚಿನ್ನದ ಪೇಸ್ಟ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ವಿಮಾನ ಶೌಚಾಲಯದ ವಾಶ್​ ಬೇಸನ್​ಲ್ಲಿ ಚಿನ್ನಪತ್ತೆ:ಇತ್ತೀಚೆಗೆ ನಡೆದಪ್ರಕರಣವೊಂದರಲ್ಲಿವಿಮಾನದ ಶೌಚಾಲಯದ ವಾಶ್ ಬೇಸಿನ್​ನಲ್ಲಿ ಅಡಗಿಸಿ ಇಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅ.7ರಂದು ಮಾಲ್ಡಿವ್ಸ್​ನ ಮಾಲೆಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಡಲಾಗಿದ್ದ ಚಿನ್ನ ಪತ್ತೆ ಮಾಡಲಾಗಿತ್ತು. 3.2 ಕೆಜಿ ತೂಕದ 1.8 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:ಬೆಂಗಳೂರು: ಮರ್ಮಾಂಗದಲ್ಲಿಟ್ಟು ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಮಹಿಳೆ ವಶಕ್ಕೆ

ABOUT THE AUTHOR

...view details