ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದ ವಿವಿಧ ವಿಮಾನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 87 ಲಕ್ಷ ರೂ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈ ಮತ್ತು ಅಬುಧಾಬಿಯಿಂದ ಮಂಗಳೂರಿಗೆ ವಿವಿಧ ವಿಮಾನಗಳಲ್ಲಿ (IX814, IX384, IX816) ಆಗಮಿಸಿದ ಮೂವರು ಪ್ರಯಾಣಿಕರಿಂದ 76,50,730 ರೂ ಮೌಲ್ಯದ 1273 ಗ್ರಾಂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 26 ಮತ್ತು 27 ರಂದು ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕರಿಂದ ಈ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಅನುಮಾನದ ಮೇರೆಗೆ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಚಿನ್ನದ ವಸ್ತುಗಳನ್ನು ಮಗುವಿನ ಆಟಿಕೆ ವಸ್ತು ಮತ್ತು ಗುದನಾಳಗಳಲ್ಲಿ ಮರೆಮಾಡಲಾಗಿತ್ತು. ಸೆಪ್ಟೆಂಬರ್ 27 ರಂದು ಐಎಕ್ಸ್ 384 ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕನನ್ನು ತಪಾಸಣೆ ಮಾಡಿದಾಗ ಆತನ ಬ್ಯಾಗನಲ್ಲಿ 176 ಗ್ರಾಂ (ನಿವ್ವಳ) ತೂಕದ 24 ಕ್ಯಾರೆಟ್ ಚಿನ್ನ ಸಿಕ್ಕಿದೆ. ಇದರ ಮೌಲ್ಯ 10,54,240 ರೂ ಆಗಿದೆ.
14.50 ಲಕ್ಷದ ಚಿನ್ನದಪುಡಿ ಪತ್ತೆ:ಇದೆ ತಿಂಗಳು ಆರಂಭದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು. ಆರೋಪಿ ಪ್ರಯಾಣಿಕ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದಿದ್ದ. ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ಇರಿಸಲಾಗಿದ್ದ ನಾಲ್ಕು ನೀಲಿ ಬಣ್ಣದ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ನಡುವೆ ಚಿನ್ನದ ಪೌಡರ್ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿ 242 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಂಡಿದ್ದರು. ಇದರ ಮೌಲ್ಯ 14.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು.
2 ಕೆಜಿ ಚಿನ್ನ ವಶ:ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸಿಂಗಾಪುರದಿಂದ ಬೆಂಗಳೂರಿಗೆ ಬಂದಿಳಿದಿದ್ದ ಭಾರತೀಯ ಮೂಲದ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಬೆಲ್ಟ್ ಒಳಗಡೆ ಚಿನ್ನವನ್ನು ಅಡಗಿಸಿಟ್ಟು ಸಾಗಣೆಗೆ ಮಾಡಲು ಯತ್ನಿಸಿದ್ದನ್ನು ಪತ್ತೆ ಹಚ್ಚಿದ್ದರು. ಆರೋಪಿಗಳಿಂದ ಸುಮಾರು 1 ಕೋಟಿ 59 ಲಕ್ಷ ಮೌಲ್ಯದ 2 ಕೆಜಿ 610 ಗ್ರಾಂ ಚಿನ್ನವನ್ನ ಸೀಜ್ ಮಾಡಿದ್ದರು. ಚಿನ್ನ ಸಮೇತ ಇಬ್ಬರು ಪ್ರಯಾಣಿಕರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದಕ್ಕೂ ಮೊದಲು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6.5 ಕೆಜಿ ತೂಕದ 4 ಕೋಟಿ ರೂ. ಮೌಲ್ಯದ 7 ಚಿನ್ನದ ಬಿಸ್ಕೆಟ್ಗಳನ್ನುನ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ:ಕೆಂಪೇಗೌಡ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ: ವಿದೇಶಿ ಮಹಿಳೆಯಿಂದ ಕಂತೆ ಕಂತೆ ದೇಶಿ ಹಣ ವಶ