ಮಂಗಳೂರು (ದ.ಕ): ಕೊರೊನಾ ಸೋಂಕು ಹೆಚ್ಚುತ್ತಾ ಹೋದಂತೆ ಪರೀಕ್ಷೆಯ ಪ್ರಮಾಣವನ್ನೂ ಏರಿಸಲಾಗಿತ್ತು. ಈ ಹಿನ್ನೆಲೆ ತ್ವರಿತ ಫಲಿತಾಂಶ ಪಡೆಯಲು ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಘಟಕಗಳ ಅಳವಡಿಸಲಾಯಿತು. ಇದಾದ ಬಳಿಕ ಸೋಂಕಿತರನ್ನು ಪತ್ತೆ ಮಾಡುವುದು ಇನ್ನಷ್ಟು ಸುಲಭವಾಗಿತ್ತು.
ಆದರೆ, ಈ ಟೆಸ್ಟ್ ವೇಳೆ ಪಾಸಿಟಿವ್ ಬಂದರೆ ಅವರನ್ನು ಅಲ್ಲಿಂದಲೇ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಹಾಗೆ ನೆಗೆಟಿವ್ ಬಂದರೆ ಆಯ್ದ ಪ್ರಕರಣಗಳಿಗೆ ಸಿಟಿ ಸ್ಕ್ಯಾನಿಂಗ್ (Computed tomography) ಮಾಡಿಕೊಳ್ಳಲು ಶಿಫಾರಸು ಮಾಡಲಾಗುತಿತ್ತು. ನೆಗೆಟಿವ್ ಬಂದ್ರೂ ಸಿಟಿ ಸ್ಕ್ಯಾನ್ ಮಾಡುವುದರ ಪ್ರಯೋಜನ ಕುರಿತ ಮಾಹಿತಿ ಇಲ್ಲಿದೆ.
ಆ್ಯಂಟಿಜನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದರೂ ಸಿಟಿ ಸ್ಕ್ಯಾನ್ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದರೂ ಜ್ಬರ, ಕೆಮ್ಮು, ಒಣಕೆಮ್ಮು, ನಿದ್ರಾಹೀನತೆ ಮೊದಲಾದ ಕೊರೊನಾ ಲಕ್ಷಣಗಳಿದ್ದರೆ ವೈದ್ಯರು ಸಿಟಿ ಸ್ಕ್ಯಾನ್ಗೆ ಸಲಹೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇಲ್ಲದಿದ್ದರೆ ಎಕ್ಸ್ ರೇ ಮೂಲಕ ಅಥವಾ ಸಿಟಿ ಸ್ಕ್ಯಾನ್ ವ್ಯವಸ್ಥೆ ಇರುವಲ್ಲಿ ಪರೀಕ್ಷೆಗೆ ಒಳಗಾಗುವಂತೆ ಸೂಚಿಸುತ್ತಾರೆ. ಇದರಿಂದ ರೋಗಿಯಲ್ಲಿ ನ್ಯುಮೋನಿಯಾ ಪ್ರಾರಂಭವಾಗಿದೆಯಾ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಆತನಲ್ಲಿ ನ್ಯುಮೋನಿಯಾ ಲಕ್ಷಣಗಳಿದ್ದರೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಶ್ವಾಸಕೋಶದಲ್ಲಿ ನ್ಯುಮೋನಿಯಾ ಪತ್ತೆ ಹಚ್ಚಲು ಸಿಟಿಸ್ಕ್ಯಾನ್ ಉಪಯೋಗವಾಗಲಿದೆ. ಇನ್ನೂ ಸಿಟಿ ಸ್ಕ್ಯಾನ್ ಮಾಡಬೇಕೆಂಬ ನಿಯಮ ರೋಗಿಗಳ ಮೇಲೆ ಅನಾವಶ್ಯಕ ಆರ್ಥಿಕ ಹೊರೆ ಮೂಡಿಸುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೇವೆ ಉಚಿತವಾಗಿ ಇದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಆಸ್ಪತ್ರೆ ನಿಗದಿಪಡಿಸಿರುವ ದರ ತೆರಬೇಕಾಗುತ್ತದೆ.
ಸರ್ಕಾರ ಈವರೆಗೆ ಕೋವಿಡ್ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ಗೆ ಇಂತಿಷ್ಟೇ ದರ ಪಡೆಯಬೇಕೆಂದು ಸೂಚಿಸಿಲ್ಲ. ಈ ಕಾರಣದಿಂದ ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಇದನ್ನು ಹೆಚ್ಚುವರಿ ಹೊರೆ ಮಾಡುವ ಆತಂಕವೂ ಇದೆ. ಆದರೆ, ಈ ಪರೀಕ್ಷೆಗೆ ತಜ್ಞ ವೈದ್ಯರು ಶಿಪಾರಸ್ಸು ಮಾಡಿದವರು ಮಾತ್ರವೇ ಮಾಡಿಕೊಳ್ಳಬೇಕು. ಉಳಿದವರು ಮಾಡಬೇಕಾಗಿಲ್ಲ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ.
ಕೊರೊನಾ ಬಂದ ಬಳಿಕ ಜನ ಮತ್ತು ಸರ್ಕಾರಕ್ಕೆ ಕೊರೊನಾಗೆ ನೀಡುವ ಚಿಕಿತ್ಸೆ ಮತ್ತು ಪರೀಕ್ಷೆ ಹೆಚ್ಚುವರಿ ಆರ್ಥಿಕ ಹೊರೆ ಸೃಷ್ಟಿಸಿದೆ. ಎಲ್ಲಾ ಕಡೆಯು ಲಭ್ಯವಿಲ್ಲದೆ, ಸೀಮಿತ ಸಂಖ್ಯೆಯಲ್ಲಿ ಸಿಟಿಸ್ಕ್ಯಾನ್ ಗಳಿರುವುದರಿಂದ ಸಿಟಿ ಸ್ಕ್ಯಾನ್ ಸೆಂಟರ್ಗಳು ಇದನ್ನು ಲಾಭದಾಯಕವಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಸರ್ಕಾರ ಕೋವಿಡ್ ಪರೀಕ್ಷೆಗಾಗಿ ಬಳಸುವ ಸಿಟಿ ಸ್ಕ್ಯಾನ್ಗೆ ದರ ನಿರ್ಧರಿಸಬೇಕಾದ ಅಗತ್ಯತೆ ಇದೆ.