ಮಂಗಳೂರು: ನಾವು ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದೆವು. ಆದರೆ ಜನ ನಮ್ಮ ಅಧಿಕಾರಕ್ಕೆ ಆಪರೇಷನ್ ಮಾಡಿದರು ಎಂದು ಬಿಜೆಪಿ ಮುಖಂಡ ಸಿ ಟಿ ರವಿ ಹೇಳಿದರು.
ಮಂಗಳೂರಿನ ಸಂಘನಿಕೇತನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮಾಜಿ ಕಾರ್ಪೋರೆಟರ್ಗಳು, ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಬೆಲ್ಲ ಇದ್ದ ಕಡೆ ಇರುವೆ ಹೋಗೋದು ಸ್ವಾಭಾವಿಕ. ಅದೇ ರೀತಿ ಕೆಲವರು ಅಧಿಕಾರದ ಕಾರಣಕ್ಕೆ ಇಲ್ಲಿಂದ ಅಲ್ಲಿಗೆ ಹೋಗಿದ್ದಾರೆ. ನಾವು ಸಚಿವರು, ಶಾಸಕರನ್ನೇ ಕರೆದುಕೊಂಡು ಹೋದ್ರೂ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಈಗ ಅವರು ಕಾರ್ಪೋರೆಟರ್ಗಳನ್ನು ಕರೆದುಕೊಂಡು ಹೋದ್ರೆ ಏನಾಗುತ್ತೆ. ಈಗ ಅವರು ಅಪರೇಷನ್ ಹಸ್ತ ಮಾಡಲಿ, ಮುಂದೆ ಜನರೇ ಹಸ್ತವನ್ನು ಅಪರೇಷನ್ ಮಾಡುತ್ತಾರೆ ಎಂದರು.
ನನ್ನ ಸೋಲಿಗೆ ನಾನೇ ಕಾರಣ:ಅಧಿಕಾರದ ಆಸೆಗೆ ಯಾರು ಎಲ್ಲೇ ಹೋದರೂ ಅಧಿಕಾರ ಉಳಿಸಿಕೊಳ್ಳಲು ಆಗಲ್ಲ. ನನ್ನ ಸೋಲಿಗೆ ನಾನೇ ಕಾರಣ, ಬೇರೆ ಯಾರನ್ನೂ ದೂರಲ್ಲ. ನನ್ನ ದುರ್ಬಲತೆಯೇ ಕಾರಣ, ಅತೀ ಹೆಚ್ಚು ವೋಟ್ ಪಡೆದರೂ ಸೋತಿದ್ದೇನೆ. ನಾವು ಪರಿಷತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಾ ಇದೀವಿ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ಆಗ್ತಾ ಇದೆ, ಅಂತಿಮ ಆಗಿಲ್ಲ. ಹಾಗಾಗಿ ಅದು ವರಿಷ್ಠರ ತೀರ್ಮಾನ, ನಾವು ಯಾವುದೇ ಚುನಾವಣೆಗೆ ನಮ್ಮ ಹಂತದಲ್ಲಿ ಸಿದ್ಧವಾಗ್ತೀವಿ ಅಷ್ಟೇ. ಈ ಮೈತ್ರಿ ವಿಚಾರದಲ್ಲಿ ವರಿಷ್ಠರ ನಡೆ ಮುಖ್ಯವಾಗಿದೆ ಎಂದು ಸಿ ಟಿ ರವಿ ಹೇಳಿದರು.
ಕರ್ನಾಟಕದಲ್ಲಿ ಸರ್ಕಾರ ಬಂದು ನಾಲ್ಕು ತಿಂಗಳು ಆಗ್ತಾ ಬಂತು. ಆರಂಭದಲ್ಲೇ ಈ ಸರ್ಕಾರ ತಪ್ಪು ಹೆಜ್ಜೆಗಳನ್ನು ಇಟ್ಟಿದೆ. ಅಧಿಕಾರ ಕೊಟ್ಟ ತಪ್ಪಿಗೆ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿದೆ. ವಿದ್ಯುತ್, ಅಬಕಾರಿ, ನೋಂದಣಿ ಶುಲ್ಕ, ಬಸ್ ದರ ಹೆಚ್ಚಳ ಆಗಿದೆ. ಇದರ ಜೊತೆಗೆ ಬರವೂ ನಮ್ಮನ್ನ ಕಾಡ್ತಿದೆ. ಕಾಕತಾಳೀಯವೋ ಕಾಲ್ಗುಣವೋ ಗೊತ್ತಿಲ್ಲ, ಕಾಂಗ್ರೆಸ್ ಬಂದಾಗ ಬರ ಇರುತ್ತೆ. ಇದು ಕಾಕತಾಳೀಯ ಅಂತ ಹೇಳಲ್ಲ, ಇದು ಕಾಂಗ್ರೆಸ್ ಕಾಲ್ಗುಣವೂ ಹೌದು. ನಾನು ಮೂಢನಂಬಿಕೆ ಅನ್ನಲ್ಲ, ಇದು ಇವರ ಕಾಲ್ಗುಣ ಅನ್ನೋ ಸಂಶಯ ಕಾಡ್ತಿದೆ. ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಬರ ಪರಿಸ್ಥಿತಿ ಬಂದಿತ್ತು ಎಂದರು.
ಇದರ ಜೊತೆಗೆ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ. ಹರಿಪ್ರಸಾದ್ ಹ್ಯೂಬ್ಲೋಟ್ ವಾಚ್, ಪಂಚೆಯೊಳಗಿನ ಖಾಕಿ ಚೆಡ್ಡಿ ಅಂತೆಲ್ಲ ಸಿದ್ದರಾಮಯ್ಯ ಬಗ್ಗೆ ಪ್ರಸ್ತಾಪಿಸಿದ್ರು. ಸದ್ಯ ಎಐಸಿಸಿ ಅವರಿಗೆ ನೋಟಿಸ್ ಕೂಡ ಕೊಟ್ಟಿದೆ. ಇದರ ಹಿಂದೆ ಡಿಕೆ ಶಿವಕುಮಾರ್ ಯೋಜನೆ ಇದೆ ಅಂತ ಹೇಳಲಾಗ್ತಿದೆ. ಈ ಮಧ್ಯೆ ಸಚಿವ ಕೆ ಎನ್ ರಾಜಣ್ಣ ಮೂರು ಜನ ಡಿಸಿಎಂ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ಹಿಂದೆ ಸಿಎಂ ಸಿದ್ದರಾಮಯ್ಯ ಯೋಜನೆ ಇದೆ ಎನ್ನಲಾಗ್ತಿದೆ. ಸರ್ಕಾರದಲ್ಲಿ ಅಪಸ್ವರ, ಮುಖ್ಯಮಂತ್ರಿ-ಡಿಸಿಎಂ ಚರ್ಚೆ ಜೋರಾಗಿದೆ.
ಸಿದ್ದರಾಮಯ್ಯ ಮನುಸ್ಮೃತಿ ಹೇರಿಕೆ ಯತ್ನ ಆಗ್ತಿದೆ ಅಂತ ಮಾತನಾಡಿದ್ದಾರೆ. ನಿನ್ನೆ ಸಂವಿಧಾನದ ಕಾರ್ಯಕ್ರಮದಲ್ಲಿ ಮನುಸ್ಮೃತಿ ಬಗ್ಗೆ ಮಾತನಾಡಿದ್ದಾರೆ. ಆದರೆ ಸಿದ್ದರಾಮಯ್ಯ ಒಂದು ವಿಚಾರ ತಿಳಿದುಕೊಳ್ಳಬೇಕು. ದೇಶದಲ್ಲಿ ಹಲವು ರಾಜರು ಆಳ್ವಿಕೆ ನಡೆಸಿದ್ದಾರೆ. ಆದರೆ ಯಾವ ರಾಜರು ಮನುಸ್ಮೃತಿಯನ್ನ ಸಂವಿಧಾನ ಆಗಿ ಬಳಸಿದ್ದಾರೆ. ಯಾವ ರಾಜರೂ ಮನುಸ್ಮೃತಿಯನ್ನ ಸಂವಿಧಾನ ಮಾಡಿಲ್ಲ. ಸದ್ಯ ಯಾವ ರಾಜ್ಯವೂ ಮನುಸ್ಮೃತಿಯನ್ನ ಆಡಳಿತದ ಭಾಗ ಮಾಡ್ತೀವಿ ಅಂತ ಹೇಳಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಈ ಹೇಳಿಕೆ ಕೊಟ್ರಿ? ಫ್ಯಾಕ್ಟ್ ಚೆಕ್ ಮಾಡಬೇಕು ಅಂತ ಹೇಳಿದ್ರೀ, ನಿಮ್ಮತ್ರ ಯಾವ ಆಧಾರ ಇದೆ? ಎಂದು ಮಾಜಿ ಶಾಸಕ ಪ್ರಶ್ನಿಸಿದರು.
ಮನುಸ್ಮೃತಿ ಹೇರಿಕೆ ವಿಚಾರದಲ್ಲಿ ಮತ್ತೆ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಹೀಗಾಗಿ ಇದೊಂದು ಸುಳ್ಳು ಸುದ್ದಿ, ಅವರದ್ದೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಸಿದ್ದರಾಮಯ್ಯ ಸುಳ್ಳು ಸುದ್ದಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಲು ಸೂಚಿಸಿದ್ದಾರೆ. ಹೀಗಾಗಿ ಇವರ ಸುಳ್ಳು ಸುದ್ದಿ ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಕೇಸ್ ಹಾಕಲಿ. ಸಿದ್ದರಾಮಯ್ಯ ಸುಳ್ಳಿನ ವಿರುದ್ಧವೇ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಲಿ. ಈ ಹಿಂದೆ ಗಾಂಧಿ ಹತ್ಯೆಯನ್ನು ಆರ್ಎಸ್ಎಸ್ ಮೇಲೆ ಹೊರಿಸಿ ನಿರಂತರ ಸುಳ್ಳು ಹೇಳಿದ್ದರು ಎಂದು ಸಿ ಟಿ ರವಿ ಕಿಡಿಕಾರಿದರು.
ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ:ಬೈಂದೂರು ಟಿಕೆಟ್ಗಾಗಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣದ ಬಗ್ಗೆ ಮಾತನಾಡಿದ ಪ್ರತಿಕ್ರಿಯಿಸಿದ ಸಿ ಟಿ ರವಿ, ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ, ಹಾಗಿದ್ರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತನಿಗೆ ಸಿಗ್ತಾ ಇರಲಿಲ್ಲ. ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿಗೆ ಸಿಗ್ತಾ ಇರಲಿಲ್ಲ. ನಳಿನ್ ಕುಮಾರ್ ಕಟೀಲ್, ಕೋಟಾ ಪೂಜಾರಿ, ಸುನೀಲ್ ಕುಮಾರ್, ಪ್ರತಾಪ್ ಸಿಂಹ ನಾಯಕರಾಗ್ತಾ ಇರಲಿಲ್ಲ. ನೂರಾರು ಬಡ ಕಾರ್ಯಕರ್ತರು ನಮ್ಮಲ್ಲಿ ಎಂಪಿ, ಎಂಎಲ್ಎ ಆಗ್ತಾ ಇರಲಿಲ್ಲ.
ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನ ಮೋಸ ಮಾಡಿದ್ದಾರೆ. ದ.ಕ ಮತ್ತು ಉಡುಪಿಯಂಥ ಬುದ್ಧಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಫೋನ್ ಮಾಡಿದ್ರೂ ಬಿಜೆಪಿ ನಾಯಕರು ಫೋನ್ಗೆ ಸಿಗ್ತಾ ಇದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳುವಲ್ಲೇ ಮಾತನಾಡ್ತಾ ಇದ್ರು. ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತನಾಡ್ತಾ ಇದ್ರು. ಅವರ ಬಳಿಯೇ ನೇರ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗೆ ಇತ್ತು. ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು. ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ. ಯಾರದ್ದೋ ಹೆಸರು ಕೇಳಿ ಬರ್ತಾ ಇದೆ ಅನ್ನೋದು ಬೇರೆ, ಸಮಗ್ರ ತನಿಖೆ ಆಗಲಿ. ಈ ಮೂಲಕ ಮೋಸ ಹೋದವರಿಗೂ ಇದೊಂದು ಪಾಠವಾಗಲಿ ಎಂದರು.
ಇದನ್ನೂ ಓದಿ:7,660 ಕೋಟಿ ಮೌಲ್ಯದ ಒಟ್ಟು 91 ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರದ ಅನುಮೋದನೆ