ಕರ್ನಾಟಕ

karnataka

ETV Bharat / state

ಸುಳ್ಯ.. ಕಬ್ಬಿಣದ ತಂತಿ ಬಳಸಿ ಗೂಡು ನಿರ್ಮಿಸಿದ ಕಾಗೆ - ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರ

ಸುಳ್ಯದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಬೆಳೆಸಿದ ಒಂದು ಮರದಲ್ಲಿ ಕಾಗೆಯೊಂದು ಕಬ್ಬಿಣದ ತಂತಿಯಿಂದ ಗೂಡನ್ನು ನಿರ್ಮಿಸಿದೆ. ಏನಿದು ಅಂತೀರಾ ಈ ಸ್ಟೋರಿ ನೋಡಿ.

ಕಬ್ಬಿಣದ ತಂತಿ ಬಳಸಿ ಗೂಡು ನಿರ್ಮಿಸಿದ ಕಾಗೆ
ಕಬ್ಬಿಣದ ತಂತಿ ಬಳಸಿ ಗೂಡು ನಿರ್ಮಿಸಿದ ಕಾಗೆ

By

Published : Sep 27, 2022, 6:44 PM IST

ಸುಳ್ಯ( ದಕ್ಷಿಣ ಕನ್ನಡ):ಮನುಷ್ಯನ ಆಧುನಿಕತೆಯ ಉನ್ನತಿಯ ಭರಾಟೆಯಲ್ಲಿ ಪಕ್ಷಿಗಳಿಗೂ ತಮ್ಮ ಗೂಡು ನಿರ್ಮಾಣಕ್ಕೆ ಬೇಕಾದ ಮೂಲ ವಸ್ತುಗಳ ಅಭಾವ ಸೃಷ್ಟಿಯಾಯಿತೇ ? ಅಥವಾ ಈ ಕಾಗೆಯು ಕೂಡಾ ಆಧುನಿಕತೆಗೆ ಹೊಂದಿಕೊಂಡು ಜೀವನವನ್ನು ಸಾಗಿಸಲು ಮುಂದಾಯಿತೇ? ಅಥವಾ ಇದು ಪರಿಸರ ನಾಶದ ಪರಿಣಾಮದ ಎಚ್ಚರಿಕೆಯೇ? ಎಂಬ ಸಂಶಯ ಉಂಟಾಗುವಂತೆ ಮಾಡಿದೆ ಈ ಘಟನೆ.

ಕಬ್ಬಿಣದ ತಂತಿ ಬಳಸಿ ಗೂಡು ನಿರ್ಮಿಸಿದ ಕಾಗೆಯ ಬಗ್ಗೆ ಕನ್ನಡ ಪ್ರಾಧ್ಯಾಪಕ ವೆಂಕಟಗಿರಿ ಅವರು ಮಾತನಾಡಿದರು

ಪಕ್ಷಿಗಳಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರವಾದ ಸಂಬಂಧ ಇರುವ ಪಕ್ಷಿ ಎಂದರೆ ಅದು ಕಾಗೆ. ಮನುಷ್ಯನಿಂದ ಗೌರವ ಹಾಗೂ ಅತೀ ಅವಮಾನಕ್ಕೆ ಒಳಗಾಗುವ ಪಕ್ಷಿ ಕೂಡಾ ಇದೇ ಕಾಗೆಯೇ ಆಗಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಪಿತೃಪಕ್ಷದಲ್ಲಿ ಕಾಗೆಗೆ ವಿಶೇಷವಾದ ಗೌರವ ಇದೆ. ಪಿತೃದರ್ಪಣ ಸಮಯದಲ್ಲಿ ಪೂಜಾವಿಧಿಗಳ ನಡುವೆ ಮೊದಲ ಭೋಜನ ಕಾಗೆಗೆ ನೀಡಲಾಗುತ್ತದೆ.

ಇನ್ನೊಂದು ಕಡೆ ಹೊಸ ಗಾಡಿಯ ಮೇಲೆ ಕಾಗೆ ಕುಳಿತರೆ ಅದು ಅಪಶಕುನ, ಒಮ್ಮೊಮ್ಮೆ ಅದರ ಸ್ವರ ಕರ್ಕಶ, ಮಗದೊಮ್ಮೆ ನೆಂಟರ ಆಗಮನದ ಶುಭ ಸೂಚಕ. ಕಾಗೆ ಶನಿ ದೇವರ ವಾಹನ ಎಂದು ವಿಶೇಷವಾದ ಸ್ಥಾನಮಾನ ಎಂಬೆಲ್ಲಾ ನಂಬಿಕೆಗಳು ಪ್ರಚಲಿತದಲ್ಲಿದೆ.

ಬಾಲ್ಯದಲ್ಲಿ ಪಠ್ಯಪುಸ್ತಕದಲ್ಲಿ ಬಾಯಾರಿದ ಬುದ್ಧಿವಂತ ಕಾಗೆ ಬಗ್ಗೆ ಕಥೆಯನ್ನು ನಾವು ಕೇಳಿದ್ದೇವೆ. ಕಾಗೆಗಳು ಪರಿಸರ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಕ್ಷಿಯಾಗಿದೆ. ಸಾಮಾನ್ಯವಾಗಿ ಕಾಗೆಗಳು ಕಸ ಕಡ್ಡಿಗಳಿಂದ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುವುದು ನಾವು ನೋಡಿರುವ ಸಹಜವಾದ ಪ್ರಕ್ರಿಯೆ. ಆದರೆ, ಇಲ್ಲೊಂದು ಕಾಗೆ ವಿಶೇಷವಾಗಿ ಗೂಡು ನಿರ್ಮಿಸಿ ಗಮನ ಸೆಳೆದಿದೆ. ಈ ಕಾಗೆ ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ತನ್ನ ಗೂಡನ್ನು ಕಟ್ಟಿರುವುದು ವಿಚಿತ್ರವಾದರೂ ಸತ್ಯ.

ಕಾಗೆಯ ಎರಡು ಗೂಡುಗಳಿರುವುದು ಪತ್ತೆ: ಈ ದೃಶ್ಯ ಕಂಡು ಬಂದಿರುವುದು ಸುಳ್ಯದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಬೆಳೆಸಿದ ಒಂದು ಮರದಲ್ಲಿ. ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆಲ್ಲನ್ನು ತೆರವುಗೊಳಿಸಲು ಮುಂದಾದಾಗ ಈ ಕೊಂಬೆಯಲ್ಲಿ ಕಾಗೆಯ ಎರಡು ಗೂಡುಗಳಿರುವುದು ಕಂಡುಬಂತು.

ಕಬ್ಬಿಣದ ತಂತಿಗಳಿಂದ ಗೂಡು ನಿರ್ಮಾಣ: ಅದರಲ್ಲಿ ಒಂದು ಗೆಲ್ಲಿನಲ್ಲಿದ್ದ ಗೂಡಿನಲ್ಲಿ ಕಾಗೆಗಳ ವಾಸ್ತವ್ಯವಿತ್ತು. ಇನ್ನೊಂದು ಗೂಡಿನಲ್ಲಿ ಕಾಗೆಗಳ ವಾಸ್ತವ್ಯವಿರಲಿಲ್ಲ. ಕೊಂಬೆ ತೆರವು ಮಾಡದೇ ಕಾಗೆಗಳ ವಾಸ್ತವ್ಯ ಇಲ್ಲದ ಗೂಡನ್ನು ನೋಡಿದಾಗ ಅಚ್ಚರಿ ಕಾದಿತ್ತು. ಇಲ್ಲಿ ಕಾಗೆಯ ಗೂಡುಗಳು ಸುಮಾರು ಎರಡು ಕೆಜಿಯಷ್ಟು ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ನಿರ್ಮಾಣವಾಗಿರುವುದು ಕಂಡು ಬಂದಿದೆ.

ಮರದ ಕಡ್ಡಿಗಳ ಅಲಭ್ಯತೆ: ಕಾಗೆಗಳು ವಾಸವಿದ್ದ ಇನ್ನೊಂದು ಗೂಡು ಕೂಡಾ ಸಂಪೂರ್ಣವಾಗಿ ಕಬ್ಬಿಣದ ತಂತಿಗಳಿಂದಲೇ ನಿರ್ಮಾಣವಾಗಿತ್ತು. ಅದನ್ನು ಮರದಲ್ಲೇ ಉಳಿಸಲಾಗಿದೆ. ಇದು ವಿಚಿತ್ರವಾದರೂ ನಂಬಲೇಬೇಕಾದ ವಿಷಯವಾಗಿದೆ. ಮರದ ಕಡ್ಡಿಗಳ ಅಲಭ್ಯತೆಯ ಹಿನ್ನೆಲೆಯಲ್ಲಿ ಮತ್ತು ಪದೇ ಪದೇ ಹಾಳಾಗುವ ಕಸ ಕಡ್ಡಿಯ ಗೂಡಿನ ಬದಲು ದೀರ್ಘ ಬಾಳಿಕೆಯ ಕಬ್ಬಿಣದ ತಂತಿಯ ಗೂಡಿಗೆ ಕಾಗೆ ಮಾರುಹೋಗಿರುವುದು ಅಚ್ಚರಿಯ ಜೊತೆಗೆ ಸೋಜಿಗವೇ ಸರಿ. ಇದೀಗ ಈ ಖಾಲಿ ಕಾಗೆ ಗೂಡನ್ನು ಇದೇ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.

ಎಲ್ಲ ಕಾಗೆಗಳು ಇದನ್ನೇ ಅನುಸರಿಸಿದರೆ ಕಬ್ಬಿಣದ ಬೆಲೆ ಗಗನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಮನೆಯ ಹೊರಗೆ ರಾಶಿ ಹಾಕಿದ ಕಬ್ಬಿಣದ ತಂತಿಗಳು ಕಾಣೆಯಾದಾಗ ಗುಜರಿಯವನ ಮೇಲೆ ಅಪವಾದ ಹೊರಿಸುವ ಮೊದಲು ಸ್ವಲ್ಪ ಯೋಚಿಸಿ. ಏನಂತೀರಾ..!? ಎಂಬ ಬರವಣಿಗೆ ಮೂಲಕ ಈ ವಿದ್ಯಾಸಂಸ್ಥೆಯ ಅಧ್ಯಾಪಕರಾದ ಶಂಕರ್ ನೆಲ್ಯಾಡಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಘಟನೆಯನ್ನು ವಿವರಿಸಿದ್ದಾರೆ.

ಓದಿ:ಬೆಂಗಳೂರು ದೇಶದ ಬಾಹ್ಯಾಕಾಶ ನಗರವೆಂದು ಪರಿಗಣಿಸ್ಪಟ್ಟಿದೆ: ಸಿಎಂ ಬೊಮ್ಮಾಯಿ‌

ABOUT THE AUTHOR

...view details