ಮಂಗಳೂರು: ಕೋಟ್ಯಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ವಿಟ್ಲ ಮಂಗಿಲಪದವು ನಿವಾಸಿ ಪ್ಯಾರೇಜಾನ್ ಯಾನೆ ಸೇಟು (37), ಬದ್ರುದ್ದೀನ್ ಯಾನೆ ಬದ್ರು (28), ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ರಾಜೇಶ್.ಆರ್ (22) ಬಂಧಿತರು. ಆರೋಪಿಗಳಿಂದ ಒಟ್ಟು 1,62,80,000 ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶ ಪಡಿಸಿಕೊಂಡಿರುವ ಅಂಬರ್ ಗ್ರೀಸ್ ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಹತ್ತಿರ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಆರೋಪಿತರಿಂದ 1,57,50,000/- ರೂ ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್), ಕಾರು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಎಚ್ಚರ.. ಎಚ್ಚರ.. ಆನ್ಲೈನ್ನಲ್ಲಿ ಹಣಗಳಿಸಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ
25 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಪೊಲೀಸರ ವಶಕ್ಕೆ(ಮೈಸೂರು):ಇತ್ತೀಚಿಗೆ, ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಮೂವರನ್ನು ಬಂಧಿಸಿದ್ದರು. ಆರೋಪಿಗಳಿಂದ 25 ಕೋಟಿ ರೂಪಾಯಿ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳು ಕೇರಳ ರಾಜ್ಯದ ಕೊಚ್ಚಿನ್ ಸಮುದ್ರದಿಂದ ಅಂಬರ್ ಗ್ರೀಸ್ ಸಂಗ್ರಹಿಸಿ ಮೈಸೂರಿನ ಹೆಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ತಂದು ಮಾರಾಟ ಮಾಡಲು ಯತ್ನಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಹೆಚ್.ಡಿ.ಕೋಟೆ ಹಾಗೂ ಜಿಲ್ಲಾ ಸೆನ್ (CEN) ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಇಬ್ಬರು ಹಡಗು ನಡೆಸುವ ನಾವಿಕರು ಸೇರಿದಂತೆ ಮೂವರನ್ನು ಸೆರೆ ಹಿಡಿದಿದ್ದರು. ಒಂದು ಕಾರನ್ನು ಜಪ್ತಿ ಮಾಡಲಾಗಿತ್ತು.
ಮೂವರು ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದ ಈ ವಸ್ತು ತಿಮಿಂಗಿಲದ ಅಂಬರ್ ಗ್ರೀಸ್ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂಬರ್ ಗ್ರೀಸ್ಗೆ ದೇಶ, ವಿದೇಶದಲ್ಲಿ ಅಧಿಕ ಬೇಡಿಕೆ ಇದೆ. ಹೆಚ್.ಡಿ.ಕೋಟೆ ಪೊಲೀಸರು ವಶಪಡಿಸಿಕೊಂಡ ಅಂಬರ್ ಗ್ರೀಸ್ ಸರಿಸುಮಾರು 25 ಕೋಟಿ ರೂ ಬೆಲೆ ಬಾಳುತ್ತದೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು.