ಎಸ್ಪಿ ಸಿಬಿ ರಿಷ್ಯಂತ್ ಹೇಳಿಕೆ ಮಂಗಳೂರು: ಬೈಕ್ನಲ್ಲಿ ಬಂದ ಯುವಕನೋರ್ವ ಯುವತಿಯೋರ್ವಳನ್ನು ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಇಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ (18) ಕೊಲೆಗೀಡಾದ ಯುವತಿ. ಕೃತ್ಯ ಎಸಗಿದ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ಈತನನ್ನು ಪದ್ಮರಾಜ್ ಎಂದು ಗುರುತಿಸಲಾಗಿದೆ.
ಗೌರಿ ಪುತ್ತೂರಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಪದ್ಮರಾಜ್ ಮತ್ತು ಗೌರಿ ಪರಿಚಯದವರಾಗಿದ್ದರು. ಅಲ್ಲದೇ ಈ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ವಿಟ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಇಬ್ಬರ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಪದ್ಮರಾಜ್ ಮಹಿಳಾ ಪೊಲೀಸ್ ಠಾಣೆ ಬಳಿ ಹೋಗುತ್ತಿದ್ದ ಗೌರಿಗೆ ಬೈಕ್ನಲ್ಲಿ ಬಂದು ಕುತ್ತಿಗೆಗೆ ಚೂರಿಯಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೌರಿಯನ್ನು ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಆಕೆ ಕೊನೆಯುಸಿರೆಳೆದಿದ್ದಾಳೆ. ವಿಷಯ ತಿಳಿದ ಪೊಲೀಸರು ಆರೋಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಪದ್ಮರಾಜ್ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿದ್ದ ಚೂರಿ ಮತ್ತು ಬೈಕ್ ಅನ್ನು ಸಹ ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಬಗ್ಗೆ ಎಸ್ಪಿ ಸಿಬಿ ರಿಷ್ಯಂತ್ ಮಾಧ್ಯಮದವರೊಂದಿಗೆ ಮಾತನಾಡಿ, ಘಟನೆ ಇಂದು ಮಧ್ಯಾಹ್ನ 1:55ರ ಸುಮಾರಿಗೆ ನಡೆದಿದೆ. ಯುವತಿ ಗೌರಿಯ ಕತ್ತು ಕೊಯ್ದು ಪದ್ಮರಾಜ್ ಕೊಲೆ ಮಾಡಿದ್ದಾನೆ. ಮೇಲ್ನೋಟಕ್ಕೆ ಈ ಪ್ರಕರಣದ ಹಿಂದೆ ಪ್ರೀತಿಯ ವಿಚಾರ ಕಂಡು ಬರುತ್ತಿದೆ. ಇನ್ನು ಆರೋಪಿ ಯುವಕ ಮೃತ ಯುವತಿಗೆ ಹಿಂದಿನಿಂದಲೂ ಪರಿಚಯಸ್ಥನಾಗಿದ್ದಾನೆ. ಯುವತಿ ಈತನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ ಬಗ್ಗೆಯೂ ಮಾಹಿತಿ ದೊರಕಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ. ಯುವತಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಫ್ಯಾನ್ಸಿ ಸ್ಟೋರ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಇಂದು ಕೂಡಾ ಆಕೆ ಕೆಲಸಕ್ಕೆ ಬಂದಿದ್ದಾಳೆ. ಬಳಿಕ ಮಾತನಾಡಲೆಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ ಇಬ್ಬರೂ ಸೇರಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಇಬ್ಬರು ಇರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸಿ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರತ್ಯೇಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆ