ಮಂಗಳೂರು(ದಕ್ಷಿಣ ಕನ್ನಡ):ರೈಲಿನಲ್ಲಿ ಕುಡಿದ ಮತ್ತಿನಲ್ಲಿ ಕತ್ತಿಯಿಂದ ದಾಳಿ ನಡೆಸಿ ಆತಂಕ ಸೃಷ್ಟಿಸಿದ ಇಬ್ಬರನ್ನು ಮಂಗಳೂರಿನ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೂನ್ 30 ರಂದು ಶುಕ್ರವಾರ ದಾದರ್‌ನಿಂದ ತಿರುನಲ್ವೇಲಿಗೆ ತೆರಳುತ್ತಿದ್ದ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಸುರತ್ಕಲ್ ಮತ್ತು ತೋಕೂರು ರೈಲ್ವೆ ಹಳಿಗಳ ನಡುವೆ ಕತ್ತಿಗಳಿಂದ ದಾಂಧಲೆ ನಡೆಸಿದ್ದಾರೆ. ಈ ಇಬ್ಬರನ್ನು ಪೊಲೀಸರು ಕತ್ತಿ ಸಮೇತ ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನ ಜಯಪ್ರಭು ಮತ್ತು ಪ್ರಸಾದ್ ಬಂಧಿತರು. ಇವರು ಗೋವಾದಿಂದ ತಿರುನಲ್ವೇಲಿಗೆ ಪ್ರಯಾಣಿಸುತ್ತಿದ್ದರು. ಕುಡಿದ ಮತ್ತಿನಲ್ಲಿದ್ದ ಇವರಿಬ್ಬರು ಸುರತ್ಕಲ್ ಮತ್ತು ತೋಕೂರು ಮಧ್ಯೆ ಕತ್ತಿ ಹಿಡಿದು ದಾಂಧಲೆ ನಡೆಸಿದ್ದಾರೆ. ರೈಲು ಸಂಖ್ಯೆ 22,629 ರಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು. ಇಬ್ಬರೂ ಕತ್ತಿಗಳನ್ನು ತೆಗೆದು ದಾಳಿ ನಡೆಸಲು ಪ್ರಾರಂಭಿಸುತ್ತಿದ್ದಂತೆ, ಎಸ್ 7 ರಿಸರ್ವೇಶನ್ ಕಂಪಾರ್ಟ್‌ಮೆಂಟ್‌ನ ಪ್ರಯಾಣಿಕರು ಭಯದಿಂದ ಜನರಲ್ ಕಂಪಾರ್ಟ್‌ಮೆಂಟ್ ಕಡೆಗೆ ಓಡಿದ್ದಾರೆ.
ಆದರೆ, ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಬಾಬು ಕೆ, ಶ್ರೀನಿವಾಸ್ ಶೆಟ್ಟಿ ಮತ್ತು ತಿಮ್ಮಪ್ಪ ಗೌಡ ಇವರು ಇಬ್ಬರು ವ್ಯಕ್ತಿಗಳ ಕೈಯಿಂದ ಕತ್ತಿಗಳನ್ನು ತೆಗೆದುಕೊಂಡು ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ನಂತರ ಅವರನ್ನು ಮಂಗಳೂರಿನ ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಟಿಟಿಇಗಳು ಮತ್ತು ಇತರ ರೈಲ್ವೆ ಸಿಬ್ಬಂದಿಗಳ ಪ್ರಯತ್ನದಿಂದ ಪ್ರಾಣಾಪಾಯ ತಪ್ಪಿದೆ. ಘಟನೆಯಲ್ಲಿ ರೈಲಿನಲ್ಲಿ ಅನೇಕ ಸೀಟುಗಳು ಮತ್ತು ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.