ಮಂಗಳೂರು:ಬೀದಿ ನಾಟಕ ಕಲಾವಿದನೊಬ್ಬ ಪೊಲೀಸನಂತೆ ನಟಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆಗಸ್ಟ್ 8ರಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 19 ವರ್ಷದ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ದೂರಿನ ವಿವರ: "ನನಗೆ ರಾಯಚೂರು ಮೂಲದ ಯಮನೂರ ಎಂಬ ಯುವಕ ಇನ್‌ಸ್ಟಾಗ್ರಾಂ ಮುಖಾಂತರ ಪರಿಚಯವಾಗಿದ್ದ. ತಾನು ವಾಮಂಜೂರು ಸ್ಟೇಷನ್ನಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದ. ನನ್ನ ಮನೆಯವರಿಗೆ ಕೆಲಸ ಕೊಡಿಸುವುದಾಗಿ ದಾಖಲಾತಿಗಳನ್ನು ಪಡೆದುಕೊಂಡಿದ್ದ. 2023ರ ಮೇ ತಿಂಗಳಲ್ಲಿ ನನ್ನನ್ನು ಕದ್ರಿ ದೇವಸ್ಥಾನದಲ್ಲಿ ಕರೆದುಕೊಂಡು ಹೋಗಿ, ಅದೇ ವಾರದಲ್ಲಿ ತಣ್ಣೀರು ಬಾವಿ ಬೀಚ್ಗೂ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ನನ್ನೊಂದಿಗೆ ಫೋಟೋ ತೆಗೆದುಕೊಂಡ ನಂತರ ಫೋಟೋ ವೈರಲ್ ಮಾಡುವುದಾಗಿ ಹೆದರಿಸಿದ್ದ. ಬಳಿಕ ನನ್ನನ್ನು ಬೆಂಗಳೂರಿಗೆ ಕರೆಯಿಸಿ ರಾತ್ರಿ ನೆಲಮಂಗಲದ ಲಾಡ್ಜ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನು. ಮೂಲ್ಕಿ ಕಿನ್ನಿಗೋಳಿಯ ಲಾಡ್ಜ್ಗೂ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ. ನಗ್ನ ಫೋಟೋಗಳನ್ನು ಮನೆಯವರು ಮತ್ತು ಸ್ನೇಹಿತರ ಮೊಬೈಲ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾದರೆ 1.5 ಲಕ್ಷ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ" ಎಂದು ನೊಂದ ಯುವತಿ ತಿಳಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ 5 ದಿನ ನ್ಯಾಯಾಂಗ ಬಂಧನ:ಆಗಸ್ಟ್ 9ರಂದು ಬೆಳಿಗ್ಗೆ ಆರೋಪಿ ಯಮನೂರ ಎಂಬಾತನನ್ನು ಮಂಗಳೂರು ನಗರದಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 5 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತ ಬೀದಿ ನಾಟಕ ಕಲಾವಿದನಾಗಿದ್ದು, ಪೊಲೀಸರ ಯೂನಿಫಾರ್ಮ್ ಧರಿಸುತ್ತಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.