ಬಂಟ್ವಾಳ :ಅಪ್ತಾಪ್ತೆ ಮೇಲೆ ಬೇರೆ ಬೇರೆ ಸಂದರ್ಭದಲ್ಲಿ ಯುವಕರು ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೋಕ್ಸೊ ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿಯ ಮೇಲೆ ಕೇರಳದ ಕೆಲವು ಯುವಕರು ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿಗಳು ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಮನೆಗೆ ಬರುವಾಗ ತಡವಾದ ಕುರಿತು ವಿಚಾರಿಸಿದಾಗ ಆಕೆ ವಿಚಾರ ತಿಳಿಸಿದ್ದಾಳೆ. ಐವರು ಆರೋಪಿಗಳು ಕೆಲವು ವರ್ಷಗಳಿಂದ ದುಷ್ಕೃತ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಬಸ್ಸಿನಲ್ಲಿ ಯುವತಿಗೆ ಕಿರುಕುಳ ಪ್ರಕರಣ : ಯುವತಿಯೊಂದಿಗೆ ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಗ್ರಾ.ಪಂ ಸದಸ್ಯನನ್ನು ಯುವಕರು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಜುಲೈ 29ರ ಸಂಜೆ ನಡೆದಿದೆ. ಯುವತಿಯೊಬ್ಬಳು ಮಂಗಳೂರಿನಿಂದ ತನ್ನ ಊರು ಮೂಡಿಗೆರೆಗೆ ಕೆಎಎಸ್ಆರ್ಟಿಸಿ ಬಸ್ಸಿನಲ್ಲಿ ಬರುತಿದ್ದಳು. ಯುವತಿಯ ಪಕ್ಕದಲ್ಲೇ ಬಂದು ಕುಳಿತ ಮಿತ್ತಬಾಗಿಲಿನ ಗ್ರಾ. ಪಂ ಸದಸ್ಯ ಕಬೀರ್ ಎಂಬಾತ ಬಸ್ ಮಡಂತ್ಯಾರು ಸಮೀಪ ಬರುತ್ತಿದ್ದಂತೆ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.