ಕರ್ನಾಟಕ

karnataka

ETV Bharat / state

ಮಾದಕ ವಸ್ತು ಮಾರಾಟ: ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ - ಸಿಸಿಬಿ

Mangaluru Crime: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

drug peddlers arrested in Mangaluru
ಬಂಧಿತ ಆರೋಪಿಗಳು

By ETV Bharat Karnataka Team

Published : Sep 23, 2023, 11:09 AM IST

ಮಂಗಳೂರು: ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ‌ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಸುಭಾಷ್ ನಗರದ ಜಾಕೀರ್ (29) ಹಾಗೂ ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ವಳಚ್ಚಿಲ್ ಪದವಿನ ಕಾರ್ತಿಕ್ ಸುವರ್ಣ (27) ಬಂಧಿತ ಆರೋಪಿಗಳು.

ನಗರದ ಉಳ್ಳಾಲಬೈಲ್ ಪರಿಸರದಲ್ಲಿ ವ್ಯಕ್ತಿಗಳಿಬ್ಬರು ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 20 ಗ್ರಾಂ ತೂಕದ 1 ಲಕ್ಷ ರೂ. ಮೌಲ್ಯದ ಎಂಡಿಎಂಎ, ಹೋಂಡಾ ಆಕ್ಟಿವಾ ಸ್ಕೂಟರ್, 2 ಮೊಬೈಲ್ ಫೋನ್, 3,300 ರೂ. ನಗದು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,15,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳ ಪೈಕಿ ಜಾಕೀರ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇನ್ನೋರ್ವ ಆರೋಪಿ ಕಾರ್ತಿಕ್ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ.

ಟೆಂಪೋ ಟ್ರಾವೆಲರ್ ಕಳ್ಳತನ- ಆರೋಪಿಗಳ ಬಂಧನ:ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳವು ಮಾಡಿದ ಮೂವರು ಆರೋಪಿಗಳನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರ ಕುಮಾರ್, ಅರೀಫ್ ಉಲ್ಲಾಖಾನ್ ಅಲಿಯಾಸ್ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ ಅಲಿಯಾಸ್ ಬೇಬಿ ಬಂಧಿತ ಆರೋಪಿಗಳು.

ಉರ್ವ ಠಾಣಾ ವ್ಯಾಪ್ತಿಯ ಕುಂಟಿಕಾನ ಮೇಲ್ಸೇತುವೆ ಬಳಿ ಟೆಂಪೋ ಟ್ರಾವೆಲರ್ ವಾಹನವನ್ನು ಸೆ.14ರಂದು ರಾತ್ರಿ 8.30ರ ವೇಳೆಗೆ ಪಾರ್ಕ್ ಮಾಡಲಾಗಿತ್ತು. ಆದರೆ ಸೆ.15ರಂದು ಬೆಳಗ್ಗೆ ಬಂದು ನೋಡಿದಾಗ ವಾಹನ ಕಳುವಾಗಿತ್ತು. ಈ ಬಗ್ಗೆ ವಾಹನದ ವಾರಸುದಾರರು ಉರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ವಾರದೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾವೆಲರ್ ವಶಪಡಿಸಿಕೊಂಡಿದ್ದಾರೆ.

ಪಾರ್ಟ್ ಟೈಂ ಜಾಬ್ ನೆಪದಲ್ಲಿ ವಂಚನೆ: ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 6.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಇನ್‌ಸ್ಟಾಗ್ರಾಂ ಖಾತೆಗೆ ಸೆ.9 ರಂದು ಅಪರಿಚಿತ ಕಂಪನಿಯ ಹೆಸರಿನಲ್ಲಿ ಜಾಹೀರಾತು ಬಂದಿತ್ತು. ಅದರಲ್ಲಿದ್ದ ಲಿಂಕ್ ಒತ್ತಿದಾಗ ಪ್ರತಿ ದಿನ ಹಣ ತೊಡಗಿಸಿ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಮೊದಲು ತೆರಿಗೆ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ಸೆ.18ರವರೆಗೆ ಒಟ್ಟು 6,32,218 ರೂ. ವರ್ಗಾಯಿಸಿದ್ದಾರೆ. ಬಳಿಕ ವಂಚನೆಗೀಡಾಗಿರುವುದು ಅರಿವಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಜಾಮೀನಿನ ಮೇಲೆ ಹೊರಬಂದು ಮತ್ತೆ ಡ್ರಗ್ಸ್ ಮಾರಾಟ: ಮಂಗಳೂರಲ್ಲಿ ಇಬ್ಬರು ಅರೆಸ್ಟ್

ABOUT THE AUTHOR

...view details