ಕರ್ನಾಟಕ

karnataka

ETV Bharat / state

ಮಂಗಳೂರು: ಕೆಲಸಕ್ಕಿದ್ದ ಯುವಕನಿಗೆ ಬೆಂಕಿ ಹಚ್ಚಿ ಸುಟ್ಟು ಹತ್ಯೆ - ಪಾರ್ಟ್ ಟೈಮ್ ಜಾಬ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಪ್ರತ್ಯೇಕ ಅಪರಾಧ ಪ್ರಕರಣಗಳು ನಡೆದಿವೆ.

ಮಂಗಳೂರು
ಮಂಗಳೂರು

By

Published : Jul 9, 2023, 7:24 AM IST

ಮಂಗಳೂರು (ದಕ್ಷಿಣ ಕನ್ನಡ):ತನ್ನ ಬಳಿ ಕೆಲಸಕ್ಕಿದ್ದ ಯುವಕನನ್ನು ಬೆಂಕಿ ಹಚ್ಚಿ ಸುಟ್ಟು ಹತ್ಯೆ ಮಾಡಿರುವ ಘಟನೆ ನಗರದ ಮುಳಿಹಿತ್ಲು ಎಂಬಲ್ಲಿ ನಡೆದಿದೆ. ಗಟ್ಯಾನ್ ಥಿ ಜಗು ಹತ್ಯೆಗೀಡಾದವನು. ಈತನನ್ನು ಪಾಂಡೇಶ್ವರದ ತೌಲಿನ್ ಹಸನ್ (32) ಎಂಬಾತ ಹತ್ಯೆಗೈದಿದ್ದಾನೆ. ಶನಿವಾರ ಬೆಳಗ್ಗೆ 8:30 ಗಂಟೆಯ ಸುಮಾರಿಗೆ ಮಂಗಳೂರು ನಗರದ ಮುಳಿಹಿತ್ತು ಜಂಕ್ಷನ್​ನಲ್ಲಿರುವ ಮಾಶುಪಾ​ ಜನರಲ್ ಸ್ಟೋರ್ ಎಂಬ ಅಂಗಡಿಯ ಹಿಂಭಾಗ ಕೃತ್ಯ ನಡೆದಿದೆ. ತೌಲಿನ್ ಹಸನ್ ತನ್ನೊಂದಿಗೆ ದುಡಿಯುತ್ತಿದ್ದ ಗಟ್ಯಾನ್ ಥಿ ಜಗು ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಬೆಂಕಿ ಕೊಟ್ಟು ಸುಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕ್ಷಿ ನಾಶ ಮಾಡುವ ಹಾಗೂ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವುದಾಗಿ ಹೇಳಿದ್ದಾನೆ. ಬೆಂಕಿ ಹಚ್ಚಲ್ಪಟ್ಟಿದ್ದರಿಂದ ಗಂಭೀರ ಗಾಯಗೊಂಡಿದ್ದ ಗಟ್ಯಾನ್ ಥಿ ಜಗುನನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋದಾಗ ಆತನನ್ನು ವೈದ್ಯಾಧಿಕಾರಿ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸರು ತನಿಖೆ ಆರಂಭಿಸಿ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಸಾಕ್ಷ್ಯ ಲಭ್ಯವಾಗಿದ್ದು ಕೊಲೆ ಪ್ರಕರಣವೆಂದು ದೃಢಪಡಿಸಿದ್ದಾರೆ. ಆರೋಪಿ ತೌಸಿಫ್ ಹುಸೈನ್‌ನನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೈವಾರಾಧನೆ ನಿಂದನೆ, ಮಹಿಳೆಯರ ಬಗ್ಗೆ ಅಶ್ಲೀಲ ಕಾಮೆಂಟ್- ಆರೋಪಿ‌ ಅರೆಸ್ಟ್: ದೈವಾರಾಧನೆಯನ್ನು ನಿಂದಿಸಿ, ಮಹಿಳೆಯರ ಬಗ್ಗೆ ಅಶ್ಲೀಲ ಕಾಮೆಂಟ್ ಅನ್ನು ನಕಲಿ‌ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜಕ್ಕೂರು ಮೈನ್ ರೋಡ್ ಅಮೃತಹಳ್ಳಿ ನಿವಾಸಿ ಶಿವರಾಜ್ ಹೆಚ್.ಕೆ. (37) ಬಂಧಿತ ಆರೋಪಿ. ಶಿವರಾಜ್ ಹೆಚ್.ಕೆ. ನಕಲಿ ಟ್ವಿಟರ್ ಖಾತೆಯಲ್ಲಿ ದೈವಾರಾಧನೆಯನ್ನು ನಿಂದಿಸಿ, ಮಹಿಳೆಯರ ಬಗ್ಗೆ ಅಶ್ಲೀಲ ಕಾಮೆಂಟ್ ಪೋಸ್ಟ್ ಮಾಡಿದ್ದ. ತುಳುನಾಡಿನ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಏಳನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ.

ಪಾರ್ಟ್ ಟೈಮ್ ಜಾಬ್ ಆಸೆ ಹುಟ್ಟಿಸಿ 1.65 ಲಕ್ಷ ರೂ. ವಂಚನೆ: ಆನ್‌ಲೈನ್ ಮೂಲಕ ಕೆಲಸ ಮಾಡುವ ಪಾರ್ಟ್ ಟೈಮ್ ಜಾಬ್ ಕೊಡಿಸುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 1,65,800 ಲಕ್ಷ ರೂ. ಹಣ ವಂಚನೆ ಎಸಗಿರುವ ಬಗ್ಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ನಗರದ ನಿವಾಸಿಯೊಬ್ಬರ ವಾಟ್ಸ್ಆ್ಯಪ್​ಗೆ ಅಪರಿಚಿತನೋರ್ವ ಜುಲೈ 5ರಂದು ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಬಗ್ಗೆ ಮೆಸೇಜ್ ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರ ವ್ಯಕ್ತಿ ಆನ್ ಲೈನ್ ಕೆಲಸದ ಬಗ್ಗೆ ವಿಚಾರಿಸುವ ಉದ್ದೇಶದಿಂದ ಸಂದೇಶಕ್ಕೆ ಉತ್ತರಿಸಿದ್ದಾರೆ.

ಆಗ ಅಪರಿಚಿತ ಗೂಗಲ್ ಮ್ಯಾಪ್ ಮೂಲಕ ಕೆಲಸ ಮಾಡುವ ಬಗ್ಗೆ J-The New Generation ಎಂಬ ಟೆಲಿಗ್ರಾಂ ಗ್ರೂಪ್​ಗೆ ಸೇರಿಸಿ ಅದರಲ್ಲಿ ಪ್ರಿಪೇಡ್ ಟಾಸ್ಕ್ ಆಡಬೇಕೆಂದು ತಿಳಿಸಿದ್ದರು. ಮೊದಲಿಗೆ 150 ರೂಪಾಯಿ ಹಣವನ್ನು ದೂರುದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಹೇಳಿದ್ದಾನೆ. ಹೀಗೆ ದೂರುದಾರರು ಹೂಡಿಕೆ ಮಾಡಿದ ಕೆಲವು ಮೊತ್ತಗಳಿಗೆ ಅತ್ತಕಡೆಯಿಂದ ಹೆಚ್ಚಿನ ಹಣವನ್ನು ಅವರ ಖಾತೆಗೆ ವರ್ಗಾಯಿಸುತ್ತಿದ್ದರು. ಇದಿಂದ ಉತ್ತೇಜಿತರಾದ ದೂರುದಾರರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುವುದೆಂದು ನಂಬಿ ತನ್ನ ಬ್ಯಾಂಕ್ ಖಾತೆಯಿಂದ ಅಪರಿಚಿತ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1,65,800/- ರೂ. ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಹಣ ಪಾವತಿಯಾಗಲೇ ಇಲ್ಲ. ಇದರಿಂದ ಮೋಸದ ಅರಿವಾಗಿ ಹಣ ಕಳೆದುಕೊಂಡ ವ್ಯಕ್ತಿ ಆನ್‌ಲೈನ್ ವಂಚನೆ ಬಗ್ಗೆ ಮಂಗಳೂರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಆನ್​​​ಲೈನ್ ಬೆಟ್ಟಿಂಗ್ ಗೀಳು: ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮನ ಬಂಧನ

ABOUT THE AUTHOR

...view details