ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಹನಿಟ್ರ್ಯಾಪ್ಗೆ ಸಿಲುಕಿ 10 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬೊಂದೇಲ್ ನಿವಾಸಿ ಪ್ರೀತಮ್, ಮೂಡುಶೆಡ್ಡೆ ನಿವಾಸಿಗಳಾದ ಮುರಳಿ, ಕಿಶೋರ್, ಸುಶಾಂತ್, ಅಭಿ, ಹಾಗೂ ಮೂಡಬಿದಿರೆ ಮೂಲದ ಯುವತಿಯನ್ನು ಬಂಧಿಸಲಾಗಿದೆ.
ಫೆಬ್ರವರಿ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಉದ್ಯಮಿ ಹನಿಟ್ರ್ಯಾಪ್‌ಗೊಳಗಾಗಿದ್ದಾರೆ. ಕೇರಳ ಮೂಲದ ಇಬ್ಬರು ಉದ್ಯಮಿಗಳು ತಮ್ಮ ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆ ಮೂಲದ ಯುವತಿಯೊಂದಿಗೆ ರೆಸಾರ್ಟ್ಗೆ ತೆರಳಿದ್ದರು. ರಾತ್ರಿ ವೇಳೆ ಅವರು ರೆಸಾರ್ಟ್ನಲ್ಲಿದ್ದಾಗಲೇ ತಂಡವೊಂದು ಕೊಠಡಿಗೆ ಏಕಾಏಕಿ ನುಗ್ಗಿತ್ತು. ತಂಡದಲ್ಲಿದ್ದ ಯುವಕರು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮಾಡಿದ್ದರು. ಉದ್ಯಮಿಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದಾರೆ. ಅಲ್ಲದೆ, ಇಂತಿಷ್ಟು ಹಣ ಕೊಟ್ಟಲ್ಲಿ ಮಾತ್ರ ಬಿಡ್ತೀವಿ, ಇಲ್ಲಾಂದ್ರೆ ವಿಡಿಯೋವನ್ನು ವೈರಲ್ ಮಾಡುತ್ತೇವೆಂದು ಧಮ್ಕಿ ಹಾಕಿದ್ದಾರೆ. ಇದರಿಂದ ಬೆದರಿದ ಉದ್ಯಮಿ ತಮ್ಮಲ್ಲಿದ್ದ ಹಣವನ್ನು ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.
ಅಷ್ಟಕ್ಕೆ ಸುಮ್ಮನಿರದ ಯುವಕರ ತಂಡ ಪದೇಪದೇ ಉದ್ಯಮಿಗೆ ಕರೆ ಮಾಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕುವಂತೆ ಹೇಳಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡ ಬಳಿಕ ಉದ್ಯಮಿ ಇತ್ತೀಚೆಗೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಮಟ್ಟಹಾಕಿದ್ದಾರೆ. ಯುವತಿ ಹಾಗೂ ಹನಿಟ್ರ್ಯಾಪ್ ತಂಡದ ಯುವಕರಿಗೆ ಸಂಪರ್ಕ ಇದೆ ಎಂಬುದು ತಿಳಿದು ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.