ಬಂಟ್ವಾಳ (ಮಂಗಳೂರು): ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೇರಬೇಕಾಗಿದ್ದ 1.32 ಕೋಟಿ ರೂ ಮೌಲ್ಯದ ಪಡಿತರ ಅಕ್ಕಿ ದಾಸ್ತಾನು ಮಳಿಗೆಯಿಂದ ನಾಪತ್ತೆಯಾಗಿದೆ. ಈ ಕುರಿತು ಪೊಲೀಸರಿಂದ ತನಿಖೆ ನಡೆಯುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ದೂರು ನೀಡಿದ್ದರು.
ದಾಸ್ತಾನು ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ:ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕೆಎಸ್ಆರ್ಟಿಸಿ ಡಿಪೋ ಎದುರಿರುವ ಸಗಟು ಗೋದಾಮಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತಿರುತ್ತದೆ. ಪಡಿತರ ವಿತರಣೆ ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಮೂಡಿದ್ದು, ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆಗಸ್ಟ್ 17ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಿದಾಗ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನಿಗಿಂತ ಅಂದಾಜು 1,32,36,030 ರೂ ಮೌಲ್ಯದ 3892 ಕ್ವಿಂಟಲ್ ಅಕ್ಕಿ ಕೊರತೆ ಇರುವುದು ಕಂಡುಬಂದಿದೆ. ಈ ಕುರಿತು ಬಂಟ್ವಾಳ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಗೋದಾಮಿನ ನಿರ್ವಾಹಕರಾಗಿದ್ದ ಕಿರಿಯ ಸಹಾಯಕನ ವಿರುದ್ಧ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.