ಮಂಗಳೂರು (ದಕ್ಷಿಣ ಕನ್ನಡ): ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಶೀರ್ ಬಂಧಿತ ಆರೋಪಿ. ಜುಲೈ 26ರಂದು ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣವೇನು? :2000ರ ಡಿಸೆಂಬರ್ 17ರಂದು ರಾತ್ರಿ 8:45ರ ಹೊತ್ತಿಗೆ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಆರೋಪಿಗಳು ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಸೇನ್ ಯಾನೆ ಮೊಹಮ್ಮದ್ ಹುಸೇನ್, ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ ಆರೋಪಿಗಳಾಗಿದ್ದು, ಹುಸೇನ್ ಮತ್ತು ಮೊಯ್ದಿನ್ ಕುದ್ರೋಳಿ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಬಶೀರ್ ಎಂಬಾತ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಗುಜರಾತ್ನಲ್ಲಿ 23 ವರ್ಷಗಳ ಕಾಲ ನೆಲೆಸಿದ್ದ. ಇದೀಗ ಉಳ್ಳಾಲಕ್ಕೆ ವಾಪಸ್ ಬಂದಿದ್ದು, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಸಾಲ ಪಡೆದ ವ್ಯಕ್ತಿಯ ಫೋಟೋ ಅಶ್ಲೀಲವಾಗಿ ಎಡಿಟ್: ಲೋನ್ ಆ್ಯಪ್‌ನಲ್ಲಿ ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರು, ಲೋನ್ ಆ್ಯಪ್ ಹಾಕಿ 3500 ರೂ. ಸಾಲಕ್ಕೆ ಅರ್ಜಿ ಹಾಕಿದ್ದರು. ಅವರ ಬ್ಯಾಂಕ್ ಖಾತೆಗೆ 2800 ರೂ. ಸಾಲ ಜಮೆ ಆಗಿತ್ತು. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರು ಪಾವತಿ ಮಾಡಬೇಕಾಗಿದ್ದುದರಿಂದ ಜು.19 ರಂದು 1400 ರೂ. ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಜು.26 ರಂದು ಆ್ಯಪ್ ಕಳುಹಿಸಿಕೊಟ್ಟ ವ್ಯಕ್ತಿಗೆ ಹಂತ ಹಂತವಾಗಿ 4,200 ರೂ. ಪಾವತಿ ಮಾಡಿರುತ್ತಾರೆ.
ಇದಾದ ಬಳಿಕ ಅಪರಿಚಿತ ವ್ಯಕ್ತಿ ದೂರುದಾರರ ಕಾಂಟಾಕ್ಟ್ ಲೀಸ್ಟ್‌ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸ್‌ಆ್ಯಪ್ ನಂಬರ್‌ಗಳಿಗೆ ಭಾವಚಿತ್ರವನ್ನು ಮತ್ತು ಸಂಪರ್ಕದಲ್ಲಿರುವ ಇತರರ ಭಾವಚಿತ್ರವನ್ನು ಅಶ್ಲೀಲ ಭಾವಚಿತ್ರದೊಂದಿಗೆ ಎಡಿಟ್ ಮಾಡಿ ಹಾಕಿ ಲೋನ್ ಪಾವತಿ ಮಾಡಿಲ್ಲವೆಂದು ಅಶ್ಲೀಲ ಸಂದೇಶವನ್ನು ರವಾನೆ ಮಾಡಿದ್ದಾರೆ. ದೂರುದಾರರು ಲೋನ್ ತೆಗೆಯುವ ಬಗ್ಗೆ ಆ್ಯಪ್ ಇನ್‌ಸ್ಟಾಲ್ ಮಾಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಅವರ ಮೊಬೈಲ್‌ನಲ್ಲಿ ಶೇಖರಣೆಗೊಂಡಿದ್ದ ಮೊಬೈಲ್ ನಂಬರ್ಗಳನ್ನು ಅವರ ಅರಿವಿಲ್ಲದೇ ತೆಗೆದುಕೊಂಡು ತೊಂದರೆ ನೀಡುವ ಉದ್ದೇಶದಿಂದ ಭಾವಚಿತ್ರ ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸ್‌ಆ್ಯಪ್ ಮೂಲಕ ವೈರಲ್ ಮಾಡಿದ್ದಾರೆ. ಈ ಬಗ್ಗೆ ದೂರುದಾರರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪುತ್ತಿಲ ಪರಿವಾರದ ವಿರುದ್ಧ ದೂರು: ಗ್ರಾಮ ಪಂಚಾಯತಿ ಉಪ ಚುನಾವಣೆಯ ಫಲಿತಾಂಶ ಬಂದ ಬಳಿಕ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೇ ವಿಜಯೋತ್ಸವ ಮೆರವಣಿಗೆ ನಡೆಸಿದ ಕಾರಣಕ್ಕೆ ಪುತ್ತಿಲ ಪರಿವಾರದ ವಿರುದ್ಧ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಮೇರೆಗೆ ಮೆರವಣಿಗೆ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಆರ್ಯಾಪು ಗ್ರಾ.ಪಂ. ವಾರ್ಡ್ 2ರ ಚುನಾವಣೆಯ ಮತ ಎಣಿಕೆ ಬುಧವಾರ ನಡೆದು, ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ಅವರು ವಿಜೇತರಾದ ಬಳಿಕ ಪರಿವಾರದ ಕಾರ್ಯಕರ್ತರು ತಾಲೂಕು ಆಡಳಿತ ಸೌಧದಿಂದ ಪುತ್ತಿಲ ಪರಿವಾರ ಕಚೇರಿಯವರೆಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆಯನ್ನು ನಡೆಸಿದ್ದರು. ಇದಕ್ಕೆ ಪೊಲೀಸ್ ಇಲಾಖೆಯ ಅನುಮತಿ ಪಡೆಯದೇ ಇರುವ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುವ ಸಂಬಂಧ ನ್ಯಾಯಾಲಯದ ಅನುಮತಿ ಕೇಳಿತ್ತು. ಕೋರ್ಟ್ ಅನುಮತಿ ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಇದನ್ನೂ ಓದಿ:ಡೇಟಿಂಗ್ ಆ್ಯಪ್ ಜಾಲ.. ಮಹಿಳೆ ಮಾತಿಗೆ ಮರುಳಾಗಿ ಕೋಟಿ ಕೋಟಿ ಕಳೆದುಕೊಂಡ ಚಿನ್ನದ ವ್ಯಾಪಾರಿ..