ಮಂಗಳೂರು: ಅಪ್ರಾಪ್ತೆಯ ಕುಮ್ಮಕ್ಕಿನಿಂದ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಆತನ ಇಬ್ಬರು ಗೆಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಕೇವಲ 12 ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕದ್ರಿ ಮಲ್ಲಿಕಟ್ಟೆ ಶಿವಭಾಗ್ ನಿವಾಸಿ ಮಹಮ್ಮದ್ ತುಫೈಲ್ (20), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್ (19), ನೀರುಮಾರ್ಗ ಬೈತುರ್ಲಿ ನಿವಾಸಿಗಳಾದ ಮಹಮ್ಮದ್ ಅಫ್ರೀದ್ (19), ಮುಕ್ಷುದ್ ಸಾಗ್ (21) ಬಂಧಿತರು. ಇವರಲ್ಲಿ ಮಹಮ್ಮದ್ ಅಫ್ರೀದ್ ಹಾಗೂ ಮುಕ್ಷುದ್ ಸಾಗ್ ಸೋದರರಾಗಿದ್ದಾರೆ.
ಕಿನ್ನಿಗೋಳಿಯ ಏಳಿಂಜೆ ವಾಸಿಯಾಗಿರುವ ಅಪ್ರಾಪ್ತೆಗೆ ನಿದೀಶ್ ಎಂಬ ಯುವಕ ಇನ್ಸ್ಟಾಗ್ರಾಮ್ ಮೂಲಕ ಪರಿಚಿತನಾಗಿದ್ದ. ಆತನೊಂದಿಗೆ ಮಾತನಾಡಲು ಅಪ್ರಾಪ್ತೆಯು ಜೂ.16 ರ ರಾತ್ರಿ 9.45ರ ವೇಳೆಗೆ ನಗರದ ಅಲೋಶಿಯಸ್ ಕಾಲೇಜಿನ ಬಳಿ ಕರೆದಿದ್ದಾಳೆ. ಅದರಂತೆ ನಿದೀಶ್ ತನ್ನಿಬ್ಬರು ಗೆಳೆಯರೊಂದಿಗೆ ಆಕೆ ಹೇಳಿದ ಸ್ಥಳಕ್ಕೆ ಬಂದಿದ್ದಾನೆ. ಬಳಿಕ, ಬಾಲಕಿಯು ತನ್ನ ಜೊತೆಗಾರೊಂದಿಗೆ ಸೇರಿ ನಿದೀಶ್ ಜೊತೆ ಜಗಳವಾಡಿದ್ದಾಳೆ. ಈ ವೇಳೆ ಆರೋಪಿಗಳು ನಿದೀಶ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಎದೆಗೆ ಚೂರಿ ಇರಿದಿದ್ದಾರೆ. ಆತನ ಗೆಳೆಯರ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು.
ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕುಡುಪು ಬೈತುರ್ಲಿ ಬಳಿಯ ವಿಶ್ವಾಸ್ ಹೆರಿಟೇಜ್ ಫ್ಲಾಟ್ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ, ಬಾಲಕಿಯನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.