ಮಂಗಳೂರು: ಕೊರೊನಾ ಭೀತಿಯಿಂದ ಶಾಲೆಯ ಬಾಗಿಲು ತೆರೆದಿಲ್ಲದಿರೋದು ಮೊದಮೊದಲಿಗೆ ಮಕ್ಕಳಿಗೆ ಸಂತಸವಾಗಿದ್ದರೂ, ಇದೀಗ ಮನೆಯಲ್ಲಿಯೇ ಕುಳಿತು ಬೋರು ಹೊಡೆಯಲು ಶುರುವಾಗಿದೆ.ಅದರಲ್ಲೂ ಕೇವಲ ಆನ್‌ಲೈನ್ ಕ್ಲಾಸಸ್, ಜೊತೆಗೆ ಒಂದಷ್ಟು ಹೊತ್ತು ಟಿವಿ, ಮೊಬೈಲ್ ವೀಕ್ಷಣೆ ಇವಿಷ್ಟೇ ಎನಿಸಿ ವಿದ್ಯಾರ್ಥಿಗಳಿಗೆ ಸಾಕೆನಿಸಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಗರದ ಆಕಾಶಭವನದ ಐದಾರು ಪೋರರು ವಿಶಿಷ್ಟವಾಗಿ ಲಾಕ್ ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.
ಮಂಗಳೂರಿನ 'ಪುಟ್ಟ' ಪೋರರಿಂದ ಸೃಜನಾತ್ಮಕ ಕಾರ್ಯ. ಯೂಟ್ಯೂಬ್ ಚಾನೆಲ್ ತೆರೆದ ಪೋರರು: ಇನ್ನೂ ಪ್ರೈಮರಿ ದಾಟದ ಈ ಪುಟ್ಟ ಪೋರರು ಈಗಲೇ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ತಾವೇ ತಮ್ಮ ತೊದಲು ನುಡಿಗಳಲ್ಲಿ ಪದ್ಯಗಳನ್ನು ರಚಿಸಿ, ಸಂಗೀತ ಸಂಯೋಜಿಸಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಒಂದಷ್ಟು ಸಮಯಗಳಿಂದ ತಮ್ಮ ಹೆತ್ತವರಿಗೆ ದುಂಬಾಲು ಬಿದ್ದು, ಗಿಟಾರ್ ಖರೀದಿಸಿ ಕಲಿಯಲು ಆರಂಭಿಸಿದ್ದಾರೆ.
ಇದೀಷ್ಟೇ ಅಲ್ಲದೇ, ಸಿಕ್ಕ ಸಮಯದಲ್ಲಿ ಚಿತ್ರಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಲ್ಲೂ ಒಂದಷ್ಟು ಕಲಿಕೆ ಆರಂಭಿಸಿದ್ದಾರೆ. ಮಕ್ಕಳ ಈ ಬೆಳವಣಿಗೆ ಗಮನಿಸಿದ ಚಿಂತನ ಸಾಂಸ್ಕೃತಿಕ ಬಳಗದ ಸಮಾನ ಮನಸ್ಕರ ತಂಡವು( ಇದರಲ್ಲಿ ಮಕ್ಕಳ ಹೆತ್ತವರೂ ಇದ್ದಾರೆ) ಮಕ್ಕಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಡುಗಾರಿಕೆ, ಆಟೋಟ, ಪೇಪರ್ ಮಾಡೆಲ್, ಪಕ್ಷಿ ವೀಕ್ಷಣೆ, ಚಿಟ್ಟೆ ವೀಕ್ಷಣೆ, ಸೂರ್ಯಗ್ರಹಣ ವೀಕ್ಷಣೆ ಹಾಗೂ ಇನ್ನಿತರ ವೈಜ್ಞಾನಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಪ್ರೇರೇಪಣೆ ನೀಡತೊಡಗಿದ್ದಾರೆ.
ಈ ತಂಡದಲ್ಲಿ ಆಯುಷ್ ಪ್ರೇಮ್, ಪವನ್ ಕುಮಾರ್ ಶೆಟ್ಟಿ, ಅಮನ್ ರೈ, ಅಜಯ್, ಅಭಿಷೇಕ್, ಸನ್ವಿತ್ ಶೆಟ್ಟಿ ಹಾಗೂ ಆದಿತ್ ಪ್ರೇಮ್ ಎಂಬ ಮಕ್ಕಳ ಬಳಗವಿದ್ದು, ಇವರಿಗೆ ಶಿಕ್ಷಕರಾದ ಪ್ರೇಮನಾಥ ಮರ್ಣೆ, ಅರವಿಂದ ಕುಡ್ಲ ಸಂಗೀತ, ಚಿತ್ರಕಲೆ, ಪೇಪರ್ ಮಾಡೆಲ್ ಗಳಲ್ಲಿ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಅರವಿಂದ ಕುಡ್ಲ ಅವರು ಪಕ್ಷಿ, ಚಿಟ್ಟೆ, ಸೂರ್ಯಗ್ರಹಣ ವೀಕ್ಷಣೆಯ ಮೂಲಕ ವೈಜ್ಞಾನಿಕವಾಗಿಯೂ ಮಕ್ಕಳನ್ನು ಸದೃಢಗೊಳಿಸುತ್ತಿದ್ದಾರೆ. ಎಂಬಿಎ ಪದವೀಧರ, ಖಾಸಗಿ ಕಂಪನಿ ಉದ್ಯೋಗಿ ಆದರ್ಶ್ ಈ ಮಕ್ಕಳಿಗೆ ಗಿಟಾರ್ ಕಲಿಸುತ್ತಿದ್ದಾರೆ. ಜೊತೆಗೆ ವಕೀಲ ಸುಕೇಶ್ ಶೆಟ್ಟಿ, ಎ.ಜೆ.ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಸುರಕ್ಷಾಧಿಕಾರಿ ರಾಜೇಶ್ ಹಾಗೂ ಶಿಕ್ಷಕಿ ಸಂಧ್ಯಾ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ.
ಮಕ್ಕಳಿಂದಲೇ ತಯಾರಾದ ಅಂದದ ಸ್ಟುಡಿಯೋ:ವಿಶೇಷವೆಂದರೆ ಈ ಮಕ್ಕಳು ತಾವೇ ಯೂಟ್ಯೂಬ್ ಚಾನೆಲ್ ತೆರೆದಿರೋದು ಮಾತ್ರವಲ್ಲ, ವಿಡಿಯೋ ಚಿತ್ರೀಕರಣಕ್ಕೂ ಬಿದಿರಿನ ಬೆತ್ತ, ಪ್ಲಾಸ್ಟಿಕ್ ಬಾಟಲಿಯ ಮೇಲ್ಬಾಗ, ಸ್ಕೇಲ್, ಸೆಲ್ಲೋ ಟೇಪ್ ಬಳಸಿ ಚಂದದ ಟ್ರೈಪಾಡನ್ನು ರಚಿಸಿದ್ದಾರೆ. ಜೊತೆಗೆ ಪಿವಿಸಿ ಪೈಪ್ ನಿಂದ ಕೊಳಲು ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚ್ಯಾನೆಲ್ 'ಎವಿಪಿ ಕ್ರಿಯೇಷನ್ಸ್' ಗೆ ವಿಡಿಯೋ ಅಪ್ಲೋಡ್ ಮಾಡಲು ಚಂದದ ಸ್ಟೂಡಿಯೋ ಮಾಡಿದ್ದಾರೆ. ಹೀಗೆ ಈ ಪೋರರ ಸಾಧನೆಯ ಪಟ್ಟಿ ಬೆಳೆಯುತ್ತಲೇ ಇದೆ.
ಮಕ್ಕಳ ಸಾಧನೆಯ ಬಗ್ಗೆ ವಕೀಲ ಸುಕೇಶ್ ಶೆಟ್ಟಿಯವರು ಮಾತನಾಡಿ, ಲಾಕ್ ಡೌನ್ ಸಮಯವು ಮಕ್ಕಳಿಗೆ ಸದುಪಯೋಗ ಆಗಬೇಕೆಂಬ ನಿಟ್ಟಿನಲ್ಲಿ ಒಂದಷ್ಟು ಬೌದ್ಧಿಕ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಚಟುವಟಿಕೆಗಳಲ್ಲಿ ತರಬೇತಿ ನೀಡಿದೆವು. ಒಂದು ತಿಂಗಳಿನಲ್ಲಿ ಅವರಲ್ಲಿನ ಸ್ವಂತ ಪ್ರತಿಭೆ ವೃದ್ಧಿಯಾಗಿರೋದು ನಮಗೆ ಗೋಚರವಾಯಿತು. ಇದೀಗ ಈ ಮಕ್ಕಳು ಶಾಲೆಯ ಹೊರತಾಗಿಯೂ ಬಹಳಷ್ಟು ವಿಚಾರಗಳನ್ನು ಅಭ್ಯಸಿಸಿದ್ದಾರೆ ಎಂದರು.
ಹೆತ್ತವರು ಕಲಿಕೆಯ ವಾತಾವರಣವನ್ನು ಸೃಷ್ಟಿಸಬೇಕು: ಶಿಕ್ಷಕ ಪ್ರೇಮನಾಥ ಮರ್ಣೆಯರು ಮಾತನಾಡಿ, ಮಕ್ಕಳು ಗಮನಿಸುವಿಕೆಯಿಂದ ಸಾಕಷ್ಟು ಕಲಿಯುತ್ತಾರೆ ಎಂಬುವುದಕ್ಕೆ ಈ ಮಕ್ಕಳೇ ನಿದರ್ಶನ. ಮೊದಲಿಗೆ ನಾವು ಒಂದಷ್ಟು ತರಬೇತಿ ನೀಡಿದರೂ, ಆ ಬಳಿಕ ಅವರದ್ದೇ ಶೈಲಿಯಲ್ಲಿ ಹಾಡು ಬರೆಯೋದು, ಸಂಗೀತ ಸಂಯೋಜಿಸುವುದು ಮಾಡಲು ಆರಂಭಿಸಿದ್ದಾರೆ. ಹೆತ್ತವರು ಕಲಿಕೆಯ ವಾತಾವರಣವನ್ನು ಸೃಷ್ಟಿಸಿದ್ದಲ್ಲಿ, ಮಕ್ಕಳು ಅವರಷ್ಟಕ್ಕೇ ತಮ್ಮ ಪ್ರತಿಭೆಯನ್ನು ಬೆಳೆಸಲು ಸಾಧ್ಯ ಎಂದು ಹೇಳಿದರು.
ಶಿಕ್ಷಕ ಅರವಿಂದ ಕುಡ್ಲ ಮಾತನಾಡಿ, ಕಲಿಕೆ ಅಂದರೆ ಪಠ್ಯ, ಪರೀಕ್ಷೆಯ ಆಧಾರದ ಮೇಲೆ ಅಂಕ ಗಳಿಸುವಿಕೆ ಎಂಬುವುದು ಸಾಮಾನ್ಯ ವಿಧಾನ. ಆದರೆ ಶಾಲೆಗಳಲ್ಲಿ ಪಠ್ಯೇತರ ವಿಚಾರದಲ್ಲಿ ಮಕ್ಕಳ ಪ್ರತಿಭೆಗೆ ಅಂಕಗಳಿಲ್ಲ. ಕಳೆದ ಆರು ತಿಂಗಳಲ್ಲಿ ಈ ಮಕ್ಕಳಿಗೆ ಪಾಠವಿಲ್ಲದಿದ್ದರೂ, ಹೋಮ್ ವರ್ಕ್ ಇಲ್ಲದಿದ್ದರೂ ಕಲಿಕೆ ಸರಾಗವಾಗಿ ಸಾಗುತ್ತಿದೆ. ಇಂತಹ ಶಿಕ್ಷಣದ ಅಗತ್ಯವಿದೆ ಎಂದು ತಿಳಿಸಿದರು.
ಈ ಬಗ್ಗೆ ಬಾಲಕ ಪವನ್ ಕುಮಾರ್ ಶೆಟ್ಟಿ ಮಾತನಾಡಿ, ಲಾಕ್ ಡೌನ್ ರಜೆಯಲ್ಲಿ ಸಾಕಷ್ಟು ವಿಚಾರದ ಬಗ್ಗೆ ನಾವು ಕಲಿತೆವು. ನಾವೇ ಸ್ವತಃ ಕ್ವಿಜ್, ಹಾಡು, ಕ್ರಿಯೇಟಿವ್ ಆರ್ಟ್ ಗಳನ್ನು ರಚಿಸಿ ನಮ್ಮದೇ ಯೂಟ್ಯೂಬ್ ಗಳಲ್ಲಿ ಅಪ್ಲೋಡ್ ಮಾಡಿದ್ದೇವೆ. ಸಾಕಷ್ಟು ಮಂದಿ ಇದನ್ನು ನೋಡಿ ನಮಗೆ ಪ್ರೋತ್ಸಾಹಿಸಿದ್ದಾರೆ. ಇದರಿಂದ ನಮಗೆ ಸಂತೋಷವಾಗಿದೆ ಎಂದು ಅಭಿಪ್ರಾಯ ಪಟ್ಟರು.