ಪುತ್ತೂರು(ದಕ್ಷಿಣ ಕನ್ನಡ):ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಸೋಮವಾರ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐಎಂ) ಪುತ್ತೂರು ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಪ್ರತಿಭಟನೆ ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ ಅವರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಆ.26ರ ತನಕ ದೇಶವ್ಯಾಪಿ ಮುಷ್ಕರ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ಬ್ರಿಟಿಷರಿಗಿಂತಲೂ ದೊಡ್ಡ ಮಟ್ಟದ ದಬ್ಬಾಳಿಕೆ ನಡೆಯುತ್ತಿದೆ. ಬಡವರು, ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಆರೋಪಿಸಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೊರೊನಾ ನಡುವೆ ಜನರಿಗೆ ಭದ್ರತೆ ಮತ್ತು ಧೈರ್ಯ ತುಂಬುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಕೊರೊನಾ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಸಾವಿರಾರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಕೈಗಾರಿಕೆಗಳು ಬಂದ್ ಆಗಿವೆ. ನಿರುದ್ಯೋಗ, ಆಹಾರದ ಕೊರತೆ, ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುವಂತಾಗಿದೆ. ಆದರೆ, ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ಚಿಂತೆಯಿಲ್ಲದಂತೆ ವರ್ತಿಸುತ್ತಿದೆ ಎಂದರು.
ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಠ ಜಿಡಿಪಿಯ ಶೇ. 3 ರಷ್ಟು ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದು ಹಾಕುವ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಎಲ್ಲಾ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕು. ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು ಅಥವಾ ತಿದ್ದುಪಡಿಗೊಳಿಸಿ ಅಮಾನತು ಮಾಡುವ ಎಲ್ಲಾ ಪ್ರಸ್ತಾಪಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್, ಅಕ್ಷರ ದಾಸೋಹ ಸಂಘಟನೆಯ ತಾಲೂಕು ಅಧ್ಯಕ್ಷೆ ಜಯಂತಿ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಇಕ್ಬಾಲ್, ಶೌಕತ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.