ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವ್ ಬಂದ 21 ಮಂದಿಯಲ್ಲಿ 7 ಮಂದಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಮಹಿಳೆಗೆ ವೆಂಟಿಲೇಟರ್ ಅಳವಡಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಕೋವಿಡ್ ಪಾಸಿಟಿವ್ ದೃಢಪಟ್ಟ 80 ವರ್ಷದ ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಇವರು ಅಧಿಕ ರಕ್ತದೊತ್ತಡ ಹಾಗೂ ಪಾರ್ಶ್ವವಾಯು ರೋಗ ಪೀಡಿತೆಯಾಗಿದ್ದಾರೆ. ಇನ್ನುಳಿದಂತೆ ಇಂದು ದಾಖಲಾದ ವ್ಯಕ್ತಿ ಸೇರಿದಂತೆ ಐದು ಮಂದಿಯ ಆರೋಗ್ಯ ಸ್ಥಿರವಾಗಿದೆ.
ಕೊರೊನಾ ಭೀತಿ ಹಿನ್ನೆಲೆ ಮಂಗಳೂರಿನಲ್ಲಿ ಇಂದು 123 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಒಟ್ಟು 340 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಕಳುಹಿಸಲಾದ 296 ಮಂದಿಯ ಗಂಟಲು ದ್ರವದ ಪರೀಕ್ಷೆ ವರದಿಯಲ್ಲಿ 294 ನೆಗೆಟಿವ್ ಮತ್ತು 2 ಪಾಸಿಟಿವ್ ಬಂದಿದೆ.
ಈವರೆಗೆ 1956 ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 21 ಪಾಸಿಟಿವ್ ಮತ್ತು 1944 ನೆಗೆಟಿವ್ ಬಂದಿದೆ. ಇಂದು 25 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈವರೆಗೆ ಒಟ್ಟು 39,516 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ. 32 ಮಂದಿ ಇಎಸ್ಐ ಆಸ್ಪತ್ರೆಯಲ್ಲಿ, 59 ಮಂದಿ ಎನ್ಐಟಿ ಕ್ವಾರಂಟೈನ್ನಲ್ಲಿ ಇದ್ದಾರೆ. ಇಂದಿಗೆ 6073 ಮಂದಿ 28 ದಿನದ ಹೋಮ್ ಕ್ವಾರಂಟೈನ್ ಪೂರೈಸಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದ್ದ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಸಾವನ್ನಪ್ಪಿದ್ದು ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.