ಮಂಗಳೂರು:ಮಹಾರಾಷ್ಟ್ರದಿಂದ ಬಂದಿದ್ದ ಕೋವಿಡ್ ಸೋಂಕಿತ ಗರ್ಭಿಣಿಗೆ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸುಸೂತ್ರವಾಗಿ ಇಂದು ಹೆರಿಗೆಯಾಗಿದೆ. ತಾಯಿ, ಮಗು ಕ್ಷೇಮವಾಗಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ.
ಮಂಗಳೂರಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ: ಮಗುವಿನ ಆರೋಗ್ಯ ಸ್ಥಿರ
ಮಹಾರಾಷ್ಟ್ರದಿಂದ ಬಂದಿದ್ದ ಗರ್ಭಿಣಿ ನಿಶ್ಶಕ್ತಿಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಲೇಡಿಗೋಶನ್ ಆಸ್ಪತ್ರೆಗೆ ಆಗಮಿಸಿದ್ದರು. ಗುರುವಾರ ಬೆಳಗ್ಗೆ ಹೆರಿಗೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯ ಮೂಲಕ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ.
ಮಹಾರಾಷ್ಟ್ರದಿಂದ ಸೋಮವಾರವಷ್ಟೇ ಮಂಗಳೂರಿಗೆ ಆಗಮಿಸಿದ್ದ ಈ ಗರ್ಭಿಣಿ ನಿಶ್ಶಕ್ತಿಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಲೇಡಿಗೋಶನ್ ಆಸ್ಪತ್ರೆಗೆ ಆಗಮಿಸಿದ್ದರು. ಅವರನ್ನು ತಪಾಸಣೆ ಮಾಡಿ ವಿಚಾರಿಸಿದಾಗ ಮುಂಬೈನಿಂದ ಆಗಮಿಸಿದ್ದಾಗಿ ಹೇಳಿದ್ದರಿಂದ ಆಕೆಯ ಆರೋಗ್ಯ ಕಾಳಜಿ ವಹಿಸಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಬುಧವಾರ ತಡರಾತ್ರಿ ಅವರ ಗಂಟಲ ದ್ರವದ ಮಾದರಿ ವರದಿಯಲ್ಲಿ ಕೋವಿಡ್-19 ಸೋಂಕು ಇರುವುದು ದೃಢಗೊಂಡಿದೆ. ತಕ್ಷಣ ಆಕೆಯನ್ನು ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಇಂದು ಬೆಳಗ್ಗೆ ಹೆರಿಗೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯ ಮೂಲಕ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ.
ಹುಟ್ಟಿದ ಮಗು ಸಹಜವಾಗಿ ಆರೋಗ್ಯವಾಗಿಯೇ ಇದ್ದು, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಸೋಂಕು ತಗುಲಿದ ತಾಯಿಯಿಂದ ಹುಟ್ಟಿದ ಮಗುವಿಗೆ ಸಾಮಾನ್ಯವಾಗಿ ಸೋಂಕು ತಗುಲುವುದಿಲ್ಲ. ಆದರೆ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ತಾಯಿ ಹಾಲನ್ನು ಮಗುವಿಗೆ ಉಣಿಸಲಾಗುತ್ತಿದೆ. ಹುಟ್ಟಿದ ಮಗುವಿನಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಇರುತ್ತದೆ. ಈಗಲೇ ತಪಾಸಣೆ ಮಾಡಿದಲ್ಲಿ ನೆಗೆಟಿವ್ ಬರುವ ಸಾಧ್ಯತೆ ಇರುವುದರಿಂದ ಇನ್ನು ಕೆಲ ದಿನಗಳು ಬಿಟ್ಟು ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.