ಮಂಗಳೂರು: ಕೋವಿಡ್ ಎರಡನೇ ಅಲೆ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಎರಡನೇ ಅಲೆಯ ಭೀತಿಯಿಂದಾಗಿ ಸಣ್ಣ ಮತ್ತು ಬೀದಿ ಬದಿಯ ವ್ಯಾಪಾರಿಗಳು ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಮಂಗಳೂರಿನ ಬೀದಿ ಬದಿ ವ್ಯಾಪಾರಿಗಳು ಕೊರೊನಾ ಎರಡನೇ ಅಲೆ ಭಯದಿಂದ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಈಗಾಗಲೇ ಮೊದಲ ಹಂತದ ಕೊರೊನಾದಲ್ಲೇ ಪ್ರತಿ ಕ್ಷೇತ್ರವೂ ನಲುಗಿ ಹೋಗಿದೆ. ಹಂತ ಹಂತವಾಗಿ ಚೇತರಿಕೆ ಕಂಡರೂ ಸಂಪೂರ್ಣ ಸುಧಾರಿಸಿಕೊಳ್ಳುವ ಸಮಯದಲ್ಲಿ ಎರಡನೇ ಅಲೆ ಶಾಕ್ ನೀಡಿದೆ. ಮೊದಲ ಹಂತಕ್ಕೆ ಹೋಲಿಸಿದರೆ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ದುಪ್ಪಟ್ಟಾಗಿದೆ. ದಿನೇದಿನೆ ಏರಿಕೆ ಕಾಣುತ್ತಿರುವ ಪ್ರಕರಣಗಳಿಂದಾಗಿ ಮಂಗಳೂರಿನ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಕೊರೊನಾದಿಂದ ವ್ಯಾಪಾರದ ಮೇಲೆ, ಆರ್ಥಿಕ ವಹಿವಾಟಿನ ಮೇಲೆ ದುಷ್ಪರಿಣಾಮ ಬೀಳಲಿರುವ ಭಯದಲ್ಲಿ ಮಂಗಳೂರಿನ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಕಳೆದ ಬಾರಿ ಕೊರೊನಾ ಆರಂಭದ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರವನ್ನು ಜಿಲ್ಲಾಡಳಿತ ನಿಲ್ಲಿಸಿತ್ತು. ಸುಮಾರು ಆರು ತಿಂಗಳ ಕಾಲ ಬೀದಿ ಬದಿ ವ್ಯಾಪಾರ ಮಾಡಲು ಸಾಧ್ಯವಾಗದೇ ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗಿದ್ದರು.