ಮಂಗಳೂರು:ದೇಶದೆಲ್ಲೆಡೆ ಕೊರೊನಾ ಹೊಸ ಸ್ವರೂಪದಲ್ಲಿ ಅತ್ಯಂತ ವೇಗವಾಗಿ ಹಬ್ಬಿ ಜನರ ನಿದ್ದೆಗೆಡಿಸಿದೆ. ಪ್ರತೀ ಕ್ಷೇತ್ರ, ಪ್ರತಿಯೊಬ್ಬರ ಮೇಲೂ ಮಾರಕ ರೋಗ ತನ್ನ ಕರಿಛಾಯೆ ಬೀರಿ ಭಯದ ವಾತಾವರಣ ಸೃಷ್ಟಿಸಿದೆ. ಪರಿಣಾಮ, ಸಾಮಾನ್ಯ ಜನರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಮನೆಕೆಲಸಕ್ಕೆ ಹೋಗುವವರ ಸಂಕಷ್ಟ ಕೇಳುವವರೇ ಇಲ್ಲದಂತಾಗಿದೆ.
ಕೋವಿಡ್ ಎರಡನೇ ಅಲೆ ಅಟ್ಟಹಾಸದ ಕಾರಣ ಮನೆಕೆಲಸ ಮಾಡುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಮನೆಗೆ ಹೋಗಿ ಮನೆ ಸ್ವಚ್ಛಗೊಳಿಸುವುದು, ಬಟ್ಟೆ ಒಗೆಯುವುದು.. ಮೊದಲಾದ ಕಾಯಕವನ್ನು ಮಾಡುವ ಇವರಿಗೀಗ ಉದ್ಯೋಗವಿಲ್ಲ.
ಕೊರೊನಾ ಕಾರಣದಿಂದಾಗಿ ಅಪಾರ್ಟ್ಮೆಂಟ್, ಮನೆಗಳ ಮಾಲೀಕರು ಮನೆಕೆಲಸ ಮಾಡಲು ಬರುವುದು ಬೇಡ ಎಂದು ಅವರನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ಉದ್ಯೋಗ ಇಲ್ಲದೇ, ಕೈಯಲ್ಲಿ ಕಾಸಿಲ್ಲದೇ ಬದುಕು ಸಾಗಿಸಲು ಪರದಾಡುತ್ತಿದ್ದಾರೆ.